ದಾವಣಗೆರೆ:ಸಿಎಂ ಬದಲಾವಣೆ ಆಗ್ತಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದರು.
ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಬಳಿ ಮಾತನಾಡಿದ ಅವರು, ಸಿಎಂ ಹಾಗೂ ರಾಜ್ಯ ನಾಯಕರ ಮಧ್ಯೆ ಏನು ಚರ್ಚೆಯಾಗಿದೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಕೇಂದ್ರದಿಂದ ಯಾವ ಸೂಚನೆ ಬರುತ್ತೋ, ಅದೇ ಫೈನಲ್ ಆಗಿರುತ್ತದೆ. ಯಾವುದೇ ನಾಯಕರು ಬಿ.ಎಸ್.ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿಲ್ಲ. ಸಿಎಂ ಸಹ ಕೇಂದ್ರದ ಸೂಚನೆ ಪಾಲಿಸುತ್ತೇನೆ ಎಂದಿದ್ದಾರೆ ಹೊರತು, ರಾಜೀನಾಮೆ ನೀಡುತ್ತೇನೆ ಎಂದಿಲ್ಲ. ವರಿಷ್ಠರು, ಶಾಸಕಾಂಗ ಪಕ್ಷದ ತೀರ್ಮಾನದಂತೆ ಸಿಎಂ ಆಯ್ಕೆಯಾಗುತ್ತೆ ಎಂದರು.
ಇನ್ನು, ಮಿತ್ರ ಮಂಡಳಿ ಸಚಿವರು ವಲಸಿಗರಲ್ಲ, ಅವರು ಬಿಜೆಪಿಯವರೇ. ಮಿತ್ರ ಮಂಡಳಿ, ಬಿಎಸ್‌ವೈ, ಕೇಂದ್ರ ವರಿಷ್ಠರ ಮಧ್ಯೆ ಚರ್ಚೆಯಾಗಿದೆ. ಅವರು ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ಬಿಎಸ್‌ವೈ ಪಕ್ಷದ ವರಿಷ್ಠರು. ಅವರ ಬಗ್ಗೆ ಗಮನಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.