ದಾವಣಗೆರೆ :ಜಿಲ್ಲೆಯಲ್ಲಿ ಮಕ್ಕಳು ಚಳಿ, ಜ್ವರ, ಡೆಂಘೀ ಜ್ವರ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಹುತೇಕ ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಮಕ್ಕಳ ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜಿಲ್ಲಾಡಳಿತ ವಿಶೇಷ ಸಭೆಗಳನ್ನ ನಡೆಸಿ ಮಕ್ಕಳ ಮೇಲೆ 3ನೇ ಅಲೆ ಅಪ್ಪಳಿಸುತ್ತಿದೆ ಎಂಬ ಭೀತಿ ದೂರವಾಗಿಸಲು ಯೋಜನೆಗಳನ್ನು ರೂಪಿಸುತ್ತಿದೆ.
ಹೆಚ್ಚಿನ ಮಕ್ಕಳು ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಬಹುತೇಕರಲ್ಲಿ ಪ್ಲೇಟ್ಲೇಟ್ ಸಂಖ್ಯೆ ಕಡಿಮೆ ಆಗುತ್ತಿದೆ. ಜಿಲ್ಲಾಸ್ಪತ್ರೆ, ಬಾಪೂಜಿ ಮಕ್ಕಳ ಆಸ್ಪತ್ರೆ ಹಾಗೂ ಎಸ್‌ಎಸ್ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಜೊತೆಗೆ ಕೆಲ ಮಕ್ಕಳನ್ನ ತೆಗೆದುಕೊಂಡು ದೂರದ ಉಡುಪಿಯ ಮಣಿಪಾಲ್ ಆಸ್ಪತ್ರೆಗೂ ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ರಕ್ತ ಮಾದರಿ ತಪಾಸಣೆ ಹೆಚ್ಚಾಗುತ್ತಿದೆ.
ಕಳೆದೊಂದು ವಾರದಿಂದ ದಾವಣಗೆರೆ ಜಿಲ್ಲೆಯಲ್ಲಿ 12 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಬಹುತೇಕ ಕಡೆ ಡೆಂಘೀ ಭೀತಿ ಶುರುವಾಗಿದೆ. ಇತರ ಜ್ವರಗಳಿಗಿಂತ ಹೆಚ್ಚು ಭೀತಿ ಹುಟ್ಟಿಸುವುದು ಡೆಂಘೀ ಜ್ವರ. ಕಾರಣ ಇದರಿಂದ ಸಾವು ಸಂಭವಿಸುವ ಸಾಧ್ಯತೆಗಳಿವೆ.