ದಾವಣಗೆರೆ: ಬೆಳ್ಳಂಬೆಳಗ್ಗೆ ನಗರಾಭಿವೃದ್ಧಿ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಿಟಿ ರೌಂಡ್ಸ್ ಹಾಕಿ ಮುಂಜಾನೆ ನಿದ್ದೆ ಮಂಪರಿನಲ್ಲಿದ್ದ ಅಧಿಕಾರಿಗಳ ಮೈ ಚಳಿ ಬಿಡಿಸಿದರು.
ದಾವಣಗೆರೆ ನಗರ ರೌಂಡ್ಸ್ ಹಾಕಿದ ಭೈರತಿ ಬಸವರಾಜ್ ಇಂದು ಮಂಜಾನೆ ಸಚಿವ ಭೈರತಿ ಬಸವರಾಜ್ ಅವರು ನಗರದ ಬನಶಂಕರಿ ಬಡಾವಣೆ, ವಿದ್ಯಾನಗರದ ಎಲ್ಐಸಿ ಬಡಾವಣೆ ಸೇರಿದಂತೆ ಕುಂದವಾಡ ಕೆರೆಯ ಬಾಲಾಜಿ ನಗರದ ಬಳಿ ಭೇಟಿ ನೀಡಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದಾವಣಗೆರೆ ನಗರದ ಶಾಮನೂರು ದ್ವಿಮುಖ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಕೆಂಡಾಮಂಡಲರಾದ ಸಚಿವ ಭೈರತಿ ಬಸವರಾಜ್, ಪಾಲಿಕೆ ಆಯುಕ್ತ ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅದೇ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಕಸ ಹಾಗೂ ಮದ್ಯದ ಬಾಟಲ್ಗಳನ್ನು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಪಾಲಿಕೆ ಆಯುಕ್ತ ವಿಶ್ವನಾಥ್ ಅವರಿಗೆ, "ರೀ ಈ ಕೆಲಸವನ್ನು ಯಾರು ಮಾಡಬೇಕು, ಇನ್ನೂ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರನಿಗೆ ನೋಟಿಸ್ ನೀಡಿ. ಮುಂದಿನ ದಿನ ಮತ್ತೆ ನಾನು ಇಲ್ಲಿಗೆ ಬಂದಾಗ ಎಲ್ಲಾ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಂಡಿರಬೇಕು" ಎಂದು ಅಧಿಕಾರಿಗಳಿಗೆ ಗಡುವು ನೀಡಿದರು. ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ್, ಮೇಯರ್ ಅಜಯ್ ಕುಮಾರ್ ಇದ್ದರು.