ದಾವಣಗೆರೆ:ನನಗೂ ಬೇಡಜಂಗಮ ಜಾತಿ ಸರ್ಟಿಫಿಕೇಟ್ ಪಡೆಯುವ ಅರ್ಹತೆ ಇದೆ. ಆದ್ರೆ ನಾನು ಜಾತ್ಯಾತೀತ ವ್ಯಕ್ತಿಯಾಗಿರುವುದರಿಂದ ಆ ಸರ್ಟಿಫಿಕೇಟ್ ಪಡೆದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಬೇಡ ಜಂಗಮರು ಎಸ್ಸಿ ಜಾತಿ ಪ್ರಮಾಣಪತ್ರ ಪಡೆಯಬಹುದು ಎಂಬ ಅರ್ಥ ಸೂಚಿಸಿದ ರೇಣುಕಾಚಾರ್ಯ, ಬೇಡ ಜಂಗಮ ನಕಲಿ ಸರ್ಟಿಫಿಕೇಟ್ ಪಡೆದಿಲ್ಲ. ಅದರಿಂದ ಯಾವುದೇ ಲಾಭ ಪಡೆದಿಲ್ಲ. ಯಾವುದೇ ತಪ್ಪನ್ನು ಮಾಡಿಲ್ಲ, 2012ರಲ್ಲಿ ನನ್ನ ಮಗಳು ಬೇಡ ಜಂಗಮ ಸರ್ಟಿಫಿಕೇಟ್ ಪಡೆದಿದ್ದಾಳೆ, ಅದನ್ನು ವಾಪಸ್ ಮಾಡಲು ಹೇಳಿದ್ದೆ, ನನ್ನ ಸಹೋದರನ ಒತ್ತಡದಿಂದ ಹೀಗಾಗಿದೆ ಎಂದು ಸಹೋದರನ ಕಡೆ ಬೆರಳು ಮಾಡಿದ್ದಾರೆ.
ಇದರಲ್ಲಿ ನನ್ನದೇನೂ ತಪ್ಪಿಲ್ಲ, ಕೆಪಿಸಿಸಿ ವಕ್ತಾರರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ. ನಾನು ಬೂಟಾಟಿಕೆಗೆ ಹೇಳುತ್ತಿಲ್ಲ, ಸದನದಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ನಾನಾಗಲಿ, ನನ್ನ ಕುಟುಂಬದವರಾಗಲಿ ಯಾವುದೇ ಲಾಭ ಪಡೆದಿಲ್ಲ. ಬೇಡ ಜಂಗಮ ಜಾತಿಯ ಚೇತನಾ ಹಿರೇಮಠ್ ಎಂಬುವವರಿಗೆ 40 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಅದು ಸಿದ್ದರಾಮಯ್ಯ ಅವಧಿಯಲ್ಲಿ ಆಗಿದೆ, ನನ್ನ ಮಗಳು ಚೇತನಾ ಯಾವುದೇ ಸೌಲಭ್ಯ ಪಡೆದಿಲ್ಲ ಎಂದು ಹೇಳಿದರು.