ದಾವಣಗೆರೆ: ಸ್ವಾಮೀಜಿ ಆದವರು ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂತಥದ್ದಲ್ಲ ಎಂದು ಶಿರಹಟ್ಟಿಯ ಶ್ರೀ ಫಕ್ಕಿರೇಶ್ವರ ಸ್ವಾಮಿ ಮಠದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಠಗಳಿಗೆ ಅನುದಾನ ನೀಡುವಾಗ ಶೇ.30ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪಿದ್ದಾರೆ. ಓರ್ವ ಸ್ವಾಮೀಜಿ ಆಗಿ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದರು.
ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಯತ್ನ ನಡೆಯುತ್ತಿವೆ. ಮೊದಲು ರಾಜ್ಯದಲ್ಲಿ ಕೋಮು ಸಾಮರಸ್ಯ ಇತ್ತು. ಈಗಲೂ ಕೂಡ ರಾಜ್ಯದಲ್ಲಿ ಸಾಮರಸ್ಯ ಇದೆ. ಆದ್ರೆ, ಕೆಲವರು ಉದ್ದೇಶ ಪೂರ್ವಕವಾಗಿ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಹುಬ್ಬಳಿ ಗಲಭೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಳಿಕ ಗಲಭೆಗೆ ಕಾರಣಕರ್ತನಾದ ಸಮಾಜವೊಂದರ ಮುಖಂಡ ಅಲ್ತಾಫ್ ಹಳ್ಳೂರ್ ಎಂಬುವನನ್ನು ಕೂಡ ಬಂಧಿಸಿದ್ದಾರೆ. ಕೆಲವರು ಪೊಲೀಸ್ ಠಾಣೆಗೆ ಹೋಗಿ ಗಲಭೆ ಮಾಡಿ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂಥವರ ಬಗ್ಗೆ ಪರ ವಹಿಸಿ ಕಾಂಗ್ರೆಸ್ ಮುಖಂಡರು ಅಮಾಯಕರನ್ನು ಬಂಧಿಸಿಬಾರದು ಎಂದು ಹೇಳುತ್ತಿದ್ದಾರೆ.
ಬಂಧಿಸಿದವರನ್ನು ಅಮಾಯಕರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ ಯಾರು ಅಮಾಯಕರು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಬೇಕಿದ್ದರೆ ಹುಬ್ಬಳ್ಳಿಗೆ ಹೋಗಿ ವಾಸ್ತವ ಸ್ಥಿತಿ ನೋಡಿಕೊಂಡು ಬರಲಿ ಎಂದರು.