ದಾವಣಗೆರೆ: ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಿಗೆ ನನ್ನ ವಯಸ್ಸಿನಷ್ಟು ರಾಜಕೀಯ ಅನುಭವವಿದೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆ ಬಂದರೂ ಪಕ್ಷದ ಹೈಕಮಾಂಡ್ ಹಾಗೂ ಯಡಿಯೂರಪ್ಪ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮ ಸಾಲಿ ಪೀಠಕ್ಕೆ ಸಿಸಿ ಪಾಟೀಲ್ ಭೇಟಿ ಜಿಲ್ಲೆಯ ಹರಿಹರ ಸಮೀಪದಲ್ಲಿರುವ ವೀರಶೈವ ಲಿಂಗಾಯತ ಪಂಚಮ ಸಾಲಿ ಪೀಠಕ್ಕೆ ಭೇಟಿ ನೀಡಿ ವಚನಾನಂದ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಯಶಸ್ವಿಯಾಗಿ ಅಧಿಕಾರ ನಡೆಸಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸರಾಗವಾಗಿ ನಡೆಯಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಹೊಸ ಸರ್ಕಾರ ಟೇಕಾಫ್ ಆಗಲು ಸಮಯಾವಕಾಶ ಬೇಕು ಎಂದರು, ನಂತರ ಕಾನೂನು ಎಲ್ಲರಿಗೂ ಒಂದೇ, ಮಾಜಿ ಸಚಿವ ಡಿ.ಕೆ ಶಿವಕುಮಾರ್ಗೆ ಒಂದು ಕಾನೂನು, ಬೇರೆಯವರಿಗೆ ಇನ್ನೊಂದು ಕಾನೂನು ಇಲ್ಲ ಎಂದರು.
ಇನ್ನು ರಾಜ್ಯದಲ್ಲಿ ತಲೆದೂರಿರುವ ಮರಳು ಸಮಸ್ಯೆ ಬಗೆಹರಿಸಲು ಎಲ್ಲಾ ಶಾಸಕರ ಸಭೆ ಕರೆಯುತ್ತೇನೆ. ಮರಳು ನೀತಿಯ ಸಮಗ್ರ ಮಾಹಿತಿ ಪಡೆಯುತ್ತಿದ್ದು, ಜನಸ್ನೇಹಿ ಮರಳು ನೀತಿ ರೂಪಿಸುತ್ತೇನೆ. ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕಲಾಗುವುದು. ಜನರಿಗೆ ಸಮರ್ಪಕವಾಗಿ ಮರಳು ಸಿಗುವಂತಾಗಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.