ದಾವಣಗೆರೆ: ಇಂದು ಮಹಾನಾಯಕ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಜಯಂತಿಗೆ ಜಿಲ್ಲೆಯ ಹರಿಹರ ತಾಲೂಕಿನ ಯುವಕನೋರ್ವ ವಿಶೇಷವಾಗಿ ನಮನ ಸಲ್ಲಿಸಿದ್ದಾನೆ. ತನ್ನ ನಾಲಿಗೆಗೆ ಪ್ಲಾಸ್ಟರ್ ಸುತ್ತಿಕೊಂಡು ನಾಲಿಗೆ ಮೂಲಕವೇ ಅಂಬೇಡ್ಕರ್ ಚಿತ್ರ ಬಿಡಿಸಿದ್ದಾರೆ. ಸತತ ಐದಾರು ಗಂಟೆಗಳ ಪರಿಶ್ರಮದ ಫಲವಾಗಿ ಅಂಬೇಡ್ಕರ್ ಅವರ ಕಪ್ಪು ಬಿಳಿಪು ಚಿತ್ರ ಅರಳಿದೆ.
ಹೌದು, ಹರಿಹರ ನಗರದ ಮೌತ್ ಆರ್ಟ್ ಖ್ಯಾತಿಯ ಜಯ ಕುಮಾರ್ ತಮ್ಮ ನಾಲಿಗೆಗೆ ಪ್ಲಾಸ್ಟರ್ ಸುತ್ತಿಕೊಂಡು ಈ ವಿಭಿನ್ನ ಕಲೆಯ ಮೂಲಕ ಚಿತ್ರ ಬಿಡಿಸಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಹರಿಹರ ನಗರದಲ್ಲಿ ಆರ್ಟ್ ಹಾಗು ಟ್ಯಾಟೋ ಅಂಗಡಿ ಇಟ್ಟುಕೊಂಡಿರುವ ಜಯ ಕುಮಾರ್ ಇಂತಹ ಚಿತ್ರ ರಚನೆಯಿಂದಲೇ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ.
ಮೌತ್ ಆರ್ಟ್ ಮೂಲಕ ಅರಳಿದ ಸಂವಿಧಾನ ಶಿಲ್ಪಿಯ ಚಿತ್ರ ಇದನ್ನು ಬಿಡಿಸಲು ನಾಲಿಗೆಗೆ ಪ್ಲಾಸ್ಟರ್ ಸುತ್ತಿಕೊಂಡು, ಬ್ಲಾಕ್ ಕ್ಯಾನ್ವಸ್ ಶೀಟ್ನಲ್ಲಿ ಬಿಳಿ ಬಣ್ಣದಲ್ಲಿ ಈ ಚಿತ್ರ ಬಿಡಿಸಿದ್ದಾರೆ. 5 ಅಡಿ ಅಗಲ ಹಾಗೂ 6 ಅಡಿ ಉದ್ದದ ಕಪ್ಪು ಬಿಳುಪು ಚಿತ್ರವನ್ನು ತಯಾರಿಸಿದ್ದಾರೆ. ಪೆನ್ಸಿಲ್ ಆರ್ಟ್, ಮೌತ್ ಆರ್ಟ್, ಬಾಯಿಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸುತ್ತಾರೆ. ಕನ್ನಡ ಚಿತ್ರರಂಗದ ದರ್ಶನ್, ಸೃಜನ್, ಅಪ್ಪು, ಉಪೇಂದ್ರ, ರಚಿತ ರಾಮ್, ಚಿಕ್ಕಣ್ಣ ಹೀಗೆ ಸಾಕಷ್ಟು ಸೆಲೆಬ್ರಿಟಿಗಳ ಚಿತ್ರಗಳನ್ನು ಸಹ ಬಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೇ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿಯವರ ಚಿತ್ರವನ್ನು ಪೆನ್ಸಿಲ್ ಆರ್ಟ್ ಮೂಲಕ ಬಿಡಿಸಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಮೈಸೂರು: ಮರಿಗಳೊಂದಿಗೆ ದರ್ಶನ ಕೊಟ್ಟ ಹುಲಿ - ವಿಡಿಯೋ
ಕೈಯಲ್ಲಿ, ಬಾಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸುವುದನ್ನು ನೋಡಿದ್ದೇವೆ. ಅದ್ರೆ ಇಡೀ ಭಾರತದಲ್ಲಿ ನಾಲಿಗೆಯಲ್ಲಿ ಅಂಬೇಡ್ಕರ್ ಅವರ ಚಿತ್ರ ಬಿಡಿಸಿ ಮೊದಲ ಪ್ರಯತ್ನದಲ್ಲೇ ಜಯ ಕುಮಾರ್ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾಲಿಗೆಯಲ್ಲೇ ಮಹಾನ್ ನಾಯಕರ ಚಿತ್ರಗಳು ಅರಳಲಿವೆ.