ದಾವಣಗೆರೆ/ದೊಡ್ಡಬಳ್ಳಾಪುರ: ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಸಿ ಮುಟ್ಟಿಸಿದೆ. ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಮನೆ ಹಾಗೂ ಕಚೇರಿ ಸೇರಿ ಏಕಕಾಲಕ್ಕೆ ಐದು ಕಡೆ ಎಸಿಬಿ ದಾಳಿ ನಡೆಸಿದೆ.
ಹಾಲಿ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರುದ್ರೇಶಪ್ಪನವರ ಶಿವಮೊಗ್ಗ ಚಾಣಕ್ಯ ನಗರದ ವಾಸದ ಮನೆ ಸೇರಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸ್ವಗ್ರಾಮ ತಣಿಗೆರೆಯಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ದೊಡ್ಡಬಳ್ಳಾಪುರ ಕಸಬಾ RI ಮನೆ ಮೇಲೆ ಎಸಿಬಿ ದಾಳಿ:
ದೊಡ್ಡಬಳ್ಳಾಪುರದ ಕಸಬಾ RI ಲಕ್ಷ್ಮಿನರಸಿಂಹ ಅವರ ಮನೆ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ವಿಎ ನಂತರ ಆರ್ಐ ಯಾಗಿ ದೊಡ್ಡಬಳ್ಳಾಪುರ ಕಸಬಾ ವ್ಯಾಪ್ತಿಯಲ್ಲಿ ಕೆಲಸ ಮಾಡಿರುವ ಲಕ್ಷ್ಮಿನರಸಿಂಹ ಅವರು ಅಕ್ರಮ ಆಸ್ತಿ ಮಾಡಿರುವ ಆರೋಪ ಕೇಳಿಬಂದಿತ್ತು.
ದೊಡ್ಡಬಳ್ಳಾಪುರ ನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ, ಸೈಟ್ಗಳು ಸೇರಿ ಹೆಸರಘಟ್ಟದಲ್ಲಿ ಆಸ್ತಿ ಮಾಡಿರುವ ಆರೋಪ ಇದೆ. ಇಂದು ಬೆಳಗ್ಗೆ ದೊಡ್ಡಬಳ್ಳಾಪುರ ನಗರದ ಅರಳು ಮಲ್ಲಿಗೆ ಬಾಗಿಲು ವೃತ್ತದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಓದಿ:ACB Raid... ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ