ದಾವಣಗೆರೆ : ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ 70 ವರ್ಷದ ವೃದ್ಧನನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಮೂವರಿಂದ ನಾಲ್ವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ನಗರದ ತಮ್ಮ ನಿವಾಸದಲ್ಲಿ ವಾಸವಿದ್ದ ಬಾಲಚಂದ್ರಪ್ಪ ಕೊಲೆಯಾಗಿರುವ ವ್ಯಕ್ತಿ.
ನಿನ್ನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಮನೆಯಲ್ಲಿ ಒಂಟಿಯಾಗಿದ್ದ ಬಾಲಚಂದ್ರಪ್ಪರ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಸುತ್ತಮುತ್ತಲಿನ ನಿವಾಸಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರಪ್ಪ, ಎಂದಿನಂತೆ ನಿನ್ನೆ ರಾತ್ರಿ ಮನೆಗೆ ಬಂದಿದ್ದಾರೆ. ಇತ್ತೀಚೆಗಷ್ಟೇ ಬಾಲಚಂದ್ರಪ್ಪ ಪತ್ನಿ ಸಾವನ್ನಪ್ಪಿದ್ದರಿಂದ ಪುತ್ರ ಹರೀಶ್ ಜೊತೆ ವಾಸವಾಗಿದ್ದರು. ಹೊರಗಡೆ ಊಟಕ್ಕೆ ಹೋಗಿದ್ದ ಹರೀಶ್, ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಅಸ್ತವ್ಯಸ್ತವಾಗಿತ್ತು. ಮನೆಯೊಳಗೆ ಬಂದು ತನ್ನ ತಂದೆಯನ್ನು ಹುಡುಕಾಡಿ, ಕೂಗಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಬೆಡ್ ರೂಂಗೆ ಹೋಗಿ ನೋಡಿದಾಗ ಕತ್ತು ಕೊಯ್ದು ಕೊಲೆಯಾಗಿರುವುದು ಗೊತ್ತಾಗಿದೆ. ರಕ್ತ ಸೋರಿಹೋದ ಕಾರಣಕ್ಕೆ ಬಾಲಚಂದ್ರಪ್ಪ ಅಲ್ಲೇ ಪ್ರಾಣ ಬಿಟ್ಟಿದ್ದಾರೆ.
70 ವರ್ಷದ ವೃದ್ಧನ ಕತ್ತು ಕೊಯ್ದು ಕೊಲೆ ತಕ್ಷಣವೇ ಹರೀಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ಕಾರಣವೇನು ಎಂಬುದನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.
ಇನ್ನು ಬಾಲಚಂದ್ರಪ್ಪ ಅವರನ್ನು ಯಾರೋ ಪರಿಚಯವಿರುವವರೇ ಹತ್ಯೆ ಮಾಡಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿದ್ದ ಯಾವ ವಸ್ತುಗಳು ಕಳ್ಳತನವಾಗದಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ. ಮಾತ್ರವಲ್ಲ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂವರಿಂದ ನಾಲ್ವರು ಕೊಲೆ ಮಾಡಿರಬಹುದು ಎಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.