ಕರ್ನಾಟಕ

karnataka

ETV Bharat / city

'ನೀವೇ ಮುಖ್ಯಮಂತ್ರಿ'.. ಬ್ಯಾನರ್ ಹಾಕಿ ಮತ್ತೆ ಕಿಡಿ ಹೊತ್ತಿಸಿದ ಜಮೀರ್ - ಜಮೀರ್ ಅಹಮದ್ ಖಾನ್ ಬ್ಯಾನರ್ ಸುದ್ದಿ

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಮಾತನ್ನು ಇದುವರೆಗೂ ಆಡುತ್ತಿದ್ದ ಜಮೀರ್ ಅಹಮದ್ ಇಂದಿನ ಕಾರ್ಯಕ್ರಮದಲ್ಲಿ ಬ್ಯಾನರ್​ನಲ್ಲಿ ನೀವೇ ಮುಖ್ಯಮಂತ್ರಿಯೆಂದು ಘೋಷ ವಾಕ್ಯವನ್ನು ಬಳಸುವ ಮೂಲಕ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಕ್ಯಾಂಪೇನ್​​ಗೆ ಇನ್ನೊಂದು ಹಂತದ ಜನಪ್ರಿಯತೆ ನೀಡುವ ಕಾರ್ಯ ಮಾಡಿದ್ದಾರೆ.

zameer
ನೀವೇ ಮುಖ್ಯಮಂತ್ರಿ

By

Published : Jun 19, 2021, 12:36 PM IST

ಬೆಂಗಳೂರು:ರಾಜ್ಯ ಕಾಂಗ್ರೆಸ್​ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ನಡೆಯುತ್ತಿರುವ ತಿಕ್ಕಾಟಕ್ಕೆ ಇನ್ನಷ್ಟು ಪುಷ್ಟಿ ನೀಡುವ ಕಾರ್ಯವನ್ನು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮಾಡಿದ್ದಾರೆ.

ಸಿದ್ದರಾಮಯ್ಯ ಪರ ಬ್ಯಾನರ್ ಅಳವಡಿಸಿದ ಜಮೀರ್​ ಅಹಮದ್

ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಪದೇಪದೇ ಹೇಳುವ ಮೂಲಕ ಪಕ್ಷದ ರಾಜ್ಯ ನಾಯಕರು ಹಾಗೂ ಇತರೆ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗುತ್ತಿರುವ ಜಮೀರ್ ಅಹ್ಮದ್ ಮತ್ತೊಮ್ಮೆ ಇಂಥದ್ದೇ ಕಾರ್ಯ ಮಾಡಿದ್ದಾರೆ.

2023 ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಹಲವು ರಾಜ್ಯ ನಾಯಕರುಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ. ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಎಂಬಿ ಪಾಟೀಲ್ ಎಚ್​.ಕೆ ಪಾಟೀಲ್, ಆರ್.ವಿ ದೇಶಪಾಂಡೆ ಸೇರಿದಂತೆ ಹತ್ತಾರು ಹೆಸರುಗಳು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳ ವಿಚಾರದಲ್ಲಿ ಕೇಳಿಬರುತ್ತಿದೆ. ಆದರೆ ಇದರಲ್ಲಿ ಅತ್ಯಂತ ಪ್ರಮುಖವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಹೆಸರು ಮೇಲ್ಪಂಕ್ತಿಯಲ್ಲಿ ಚಾಲನೆಯಲ್ಲಿವೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಪ್ರದಾಯದ ಪ್ರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ. ಈ ಪ್ರಕಾರ ಸಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ. ಆದರೆ 2013ರಿಂದ ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಕಾಂಗ್ರೆಸ್ ಪಕ್ಷದಲ್ಲಿ ಇವರಿಗೆ ಸಾಕಷ್ಟು ಶಾಸಕರ ಬೆಂಬಲ ಕೂಡ ಇದೆ. ಹಲವು ಮುಖಂಡರು ಇವರ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಪರ ದನಿಯೆತ್ತಿರುವ ಅವರಲ್ಲಿ ಜಮೀರ್ ಅಹಮದ್ ಕೂಡ ಒಬ್ಬರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬದಾಮಿ ಕ್ಷೇತ್ರವನ್ನು ಬಿಟ್ಟು ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಾರಕ್ಕೊಮ್ಮೆಯಾದರೂ ಚಾಮರಾಜಪೇಟೆಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕಾರ್ಯವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಮಾರಂಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಹಾಗೂ ಅವರು ಚಾಮರಾಜಪೇಟೆಯಿಂದ ಸ್ಪರ್ಧಿಸಬೇಕು ಎಂದು ಒತ್ತಡ ಹೇರುವ ಕಾರ್ಯವನ್ನು ಜಮೀರ್ ನಿರಂತರವಾಗಿ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರ ಮೂಲಕ ಒತ್ತಡ ಹೇರುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇಂದು ಮರುಕಳಿಕೆ

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಮಾತನ್ನು ಇದುವರೆಗೂ ಆಡುತ್ತಿದ್ದ ಜಮೀರ್ ಅಹಮದ್ ಇಂದಿನ ಕಾರ್ಯಕ್ರಮದಲ್ಲಿ ಬ್ಯಾನರ್​ನಲ್ಲಿ ನೀವೇ ಮುಖ್ಯಮಂತ್ರಿಯೆಂದು ಘೋಷ ವಾಕ್ಯವನ್ನು ಬಳಸುವ ಮೂಲಕ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಕ್ಯಾಂಪೇನ್​​ಗೆ ಇನ್ನೊಂದು ಹಂತದ ಜನಪ್ರಿಯತೆ ನೀಡುವ ಕಾರ್ಯ ಮಾಡಿದ್ದಾರೆ.

ಎರಡು ವಾರದ ಹಿಂದೆ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂದು ಹೇಳಿ ಡಿ.ಕೆ ಶಿವಕುಮಾರ್ ಕೆಂಗಣ್ಣಿಗೆ ಗುರಿಯಾಗಿದ್ದ ಜಮೀರ್, ಪರೋಕ್ಷವಾಗಿ ನೋಟಿಸ್ ನೀಡುವ ಎಚ್ಚರಿಕೆಗೆ ಗುರಿಯಾಗಿದ್ದರು. ಆದರೆ ಸಿದ್ದರಾಮಯ್ಯ ಅವರ ಬೆಂಬಲ ತಮಗಿದೆ ಎಂಬ ವಿಶ್ವಾಸದಲ್ಲಿ ಜಮೀರ್ ಮತ್ತೆ ಮತ್ತೆ ಇಂತಹ ಹೇಳಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಸಾರಿ ಇವರ ನಡವಳಿಕೆಗೆ ಪಕ್ಷದ ರಾಜ್ಯಾಧ್ಯಕ್ಷರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:SSLC ಪರೀಕ್ಷೆ ಸರಳೀಕರಣ: ಎರಡೇ ದಿನದಲ್ಲಿ 6 ವಿಷಯಗಳಿಗೂ ಎಕ್ಸಾಂ!

ABOUT THE AUTHOR

...view details