ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಓಬೆಜಿ ಜಸ್ಟಿಸ್ ಅಲಿಯಾಸ್ ಎಂಎಂಡಿ ಮೋಲಾ(31) ಮತ್ತು ಸಾಮ್ಯುಯಲ್ (37) ಬಂಧಿತರು. ಆರೋಪಿಗಳಿಂದ 30 ಸಾವಿರ ರೂ ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್, 2 ಮೊಬೈಲ್, 1,200 ರೂ. ನಗದು ಜಪ್ತಿ ಮಾಡಲಾಗಿದೆ.
ಇಬ್ಬರ ವೀಸಾ ಅವಧಿ ಮುಕ್ತಾಯಗೊಂಡು ಒಂದು ವರ್ಷಗಳಾಗಿದ್ದು, ಈ ಹಿಂದೆ ಪೂರ್ವ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನಗರದಲ್ಲಿಯೇ ಅಕ್ರಮವಾಗಿ ವಾಸವಾಗಿದ್ದರು. ಜೀವನ ನಿರ್ವಹಣೆಗಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪೈಕಿ ಓಬೆಜಿ ಜಸ್ಟಿಸ್ ನೈಜೀರಿಯಾದಲ್ಲಿ ಎಂಎಂಡಿ ಮೋಲಾ ಎಂಬ ಹೆಸರಿನಲ್ಲಿ ಪ್ರಖ್ಯಾತ ಯುಟ್ಯೂಬರ್ ಆಗಿದ್ದಾನೆ. ಯುಟ್ಯೂಬ್ನಲ್ಲಿ ಎಂಎಂಡಿ ಮೋಲಾ ಹೆಸರಿನಲ್ಲಿ ಹತ್ತಾರು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ. ಸ್ಥಳೀಯ ಸರ್ಕಾರದ ವಿರುದ್ಧ ಕೆಲ ಹೇಳಿಕೆ ದಾಖಲಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.