ಬೆಂಗಳೂರು: ರಾಜ್ಯಸಭೆಗೆ ಹಿರಿಯ ನಾಯಕ ಜೈರಾಮ್ ರಮೇಶ್ ಅವರನ್ನ ಮರು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಹಿರಿಯರಿಗೆ ಮಣೆ ಹಾಕುವ ಸಂಪ್ರದಾಯ ಮುಂದುವರಿಸಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದಿದ್ದರು. ಆದ್ರೆ, ಇದೀಗ ಕೈ ಲೆಕ್ಕಾಚಾರ ತಲೆಕೆಳಗಾಗಿದೆ.
ಮುಂಬರುವ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದ ಯುವ ನಾಯಕರಿಗೆ ಆದ್ಯತೆಯ ಮೇರೆಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಜ್ಯಸಭೆಗೆ ಕಾಂಗ್ರೆಸ್ನ ಹಿರಿಯ ಸದಸ್ಯ ಜೈರಾಮ್ ರಮೇಶ್ ಆಯ್ಕೆ ಮಾಡುವ ಮೂಲಕ ಹಿರಿಯರಿಗೆ ಮಣೆ ಹಾಕುವ ಸಂಪ್ರದಾಯ ಮುಂದುವರೆದಿದೆ. ಹೈಕಮಾಂಡ್ ಒಪ್ಪಿಗೆ ಮೇರೆಗೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ನೇಮಕ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಹುದ್ದೆಯನ್ನು ಅನುಭವಿಸಿರುವ ಹಿರಿಯ ನಾಯಕರಿಗೆ ಅವಕಾಶ ಲಭಿಸಿದೆ. ಮಾಜಿ ಸಂಸದರು, ಸಚಿವರು ಹಾಗೂ ಶಾಸಕರಿಗೆ ಅವಕಾಶ ನೀಡಲಾಗಿದೆ. ಇದು ಪಕ್ಷದ ಯುವ ನಾಯಕರಲ್ಲಿ ಸಾಕಷ್ಟು ಬೇಸರ ಮೂಡಿಸಿದ್ದು, ಒಂದಿಷ್ಟು ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕಳೆದ ವರ್ಷ ರಾಜ್ಯಸಭೆ ಪ್ರವೇಶಕ್ಕೆ ಅವಕಾಶ ನೀಡಿದಾಗ ಒಂದಷ್ಟು ಯುವ ಸಮುದಾಯವು ಕಾಂಗ್ರೆಸ್ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿತ್ತು. ಆದರೆ, ಇದೀಗ ಇರುವ ಏಕೈಕ ಅವಕಾಶವನ್ನ ಮತ್ತೊಮ್ಮೆ ಹಿರಿಯ ನಾಯಕ ಜೈರಾಮ್ ರಮೇಶ್ಗೆ ನೀಡಿರುವುದು ಯುವ ನಾಯಕರ ಬೇಸರಕ್ಕೆ ಕಾರಣವಾಗಿದೆ. ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತವಾಗಿರುವ ಯುವಕರಿಗೆ ಅಧಿಕಾರ ಅನುಭವಿಸುವ ಅವಕಾಶ ಸಿಗುತ್ತಿಲ್ಲ. ಸದ್ಯಕ್ಕೆ ಅಧಿಕಾರ ಅನುಭವಿಸುತ್ತಿರುವವರಿಂದ ಸಮರ್ಪಕವಾಗಿ ಪಕ್ಷ ಕಟ್ಟುವ ಕಾರ್ಯ ಆಗುತ್ತಿಲ್ಲ ಎಂಬ ಆರೋಪವನ್ನು ಹಲವರು ಮಾಡುತ್ತಿದ್ದಾರೆ.