ದೊಡ್ಡಬಳ್ಳಾಪುರ: ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸರು ಸದಾ ಒತ್ತಡದಲ್ಲಿ ಬದುಕುತ್ತಾರೆ. ಪೊಲೀಸರ ಒತ್ತಡ ಕಡಿಮೆ ಮಾಡುವ ಸಲುವಾಗಿ ದೊಡ್ಡಬಳ್ಳಾಪುರ ನಗರದ ಬಾಬು ಜಗಜೀವನ್ ರಾಂ ಭವನದಲ್ಲಿ ಯೋಗ ಶಿಬಿರವನ್ನು ಅಯೋಜನೆ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ, ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ವ್ಯಾಪ್ತಿಯಲ್ಲಿನ ಪೊಲೀಸ್ ಸಿಬ್ಬಂದಿಗೆ 5 ದಿನಗಳ ಯೋಗ, ಧ್ಯಾನ ಶಿಬಿರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನವರು ಪೊಲೀಸರಿಗೆ ಒತ್ತಡ ಮುಕ್ತ ಬದುಕಿನ ಬಗ್ಗೆ ತರಬೇತಿ ಕೊಡುತ್ತಿದ್ದಾರೆ. ಪೊಲೀಸ್ ಕೆಲಸವೇ ಸದಾ ಒತ್ತಡದಲ್ಲಿರುವ ಕೆಲಸ. ಸಿಬ್ಬಂದಿಗೆ ಸಾರ್ವಜನಿಕರ ಜೊತೆ ಬೆರೆತು, ಠಾಣೆಗಳಿಗೆ ಬರುವ ದೂರುಗಳನ್ನು ನೋಡಿ ಕೆಲವರು ಮಾನಸಿಕವಾಗಿಯೂ ಕುಗ್ಗಿದ್ದಾರೆ. ಹೀಗಾಗಿ, ಪೊಲೀಸ್ ಸಿಬ್ಬಂದಿ ಒತ್ತಡ ನಿವಾರಣೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಯೋಗ ಹಾಗೂ ಧ್ಯಾನದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.