ಕರ್ನಾಟಕ

karnataka

ETV Bharat / city

ನಿನ್ನೆ ಸುರಿದ ಮಳೆ ಎಫೆಕ್ಟ್: ಸಿಲಿಕಾನ್ ಸಿಟಿಯಲ್ಲಿ ಜನ - ಜೀವನ ಅಸ್ತವ್ಯಸ್ತ - ಸಾರಕ್ಕಿ ಬಳಿಯ ಶಾಕಂಬರಿ ನಗರ

ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಅದೇ ರೀತಿ, ಕೆಲ ಭಾಗಗಳಲ್ಲಿ ರಾಜಕಾಲುವೆ, ಉದ್ಯಾನ, ಮೈದಾನಗಳು ಸಂಪೂರ್ಣ ಜಲಾವೃತಗೊಂಡು ಮಧ್ಯಾಹ್ನವರೆಗೂ ನೀರು ಹರಿಯುತ್ತಿದ್ದ ದೃಶ್ಯ ಕಂಡಿತು.

yesturday rain effect problem
ನಿನ್ನೆ ಸುರಿದ ಮಳೆ ಎಫೆಕ್ಟ್

By

Published : Jun 5, 2021, 5:44 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದ್ದು, ಕೆಲ ಬಡಾವಣೆಗಳ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಓದಿ: ಗೂಗಲ್ ಆಯ್ತು.. ಇದೀಗ ಮತ್ತೊಂದು ಇ-ಕಾಮರ್ಸ್​ ಸಂಸ್ಥೆಯಿಂದ ಕನ್ನಡಕ್ಕೆ ಅವಮಾನ: ಕನ್ನಡಿಗರ ಆಕ್ರೋಶ..!

ನಗರದ ಸಾರಕ್ಕಿ ಬಳಿಯ ಶಾಕಂಬರಿ ನಗರದಲ್ಲಿ ರಸ್ತೆಯ ಪೂರ್ತಿ ಮಳೆ ನೀರು ಹರಿದು ವಾಹನಗಳು ಮುಳುಗಿ ಹೋಗಿವೆ. ಮಳೆ ನೀರಿನ ಜೊತೆ ಕೊಳಚೆ ನೀರು ಮಿಶ್ರಿತಗೊಂಡು ದುರ್ವಾಸನೆ ಬರುತ್ತಿದ್ದು, ಮಳೆ ಕಡಿಮೆ ಆದರೂ ಇನ್ನೂ ನೀರಿನ ಹರಿವು ಕಡಿಮೆ ಆಗಿಲ್ಲ. ಶಾಕಂಬರಿ ನಗರದ ಬಹುತೇಕ ಮನೆಗಳಿಗೆ ನುಗ್ಗಿದ ನೀರು ಅಗತ್ಯ ವಸ್ತು ಕೊಳ್ಳಲು ಸಹ ಮನೆಯಿಂದ ಆಚೆ ಬರಲಾರದ ಸ್ಥಿತಿಯಲ್ಲಿ ನಿವಾಸಿಗಳು ಇದ್ದಾರೆ.

ರಾಜಧಾನಿಯಲ್ಲಿ ಭಾರೀ ಮಳೆಗೆ ತಗ್ಗು ಪ್ರದೇಶಗಳ ಜನಜೀವನ ಅಸ್ತವ್ಯಸ್ತ:

ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಚರಂಡಿ ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು. ಅದೇ ರೀತಿ, ಕೆಲ ಭಾಗಗಳಲ್ಲಿ ರಾಜಕಾಲುವೆ, ಉದ್ಯಾನ, ಮೈದಾನಗಳು ಸಂಪೂರ್ಣ ಜಲಾವೃತಗೊಂಡು ಮಧ್ಯಾಹ್ನವರೆಗೂ ನೀರು ಹರಿಯುತ್ತಿದ್ದ ದೃಶ್ಯ ಕಂಡಿತು.

ಪ್ರಮುಖವಾಗಿ ಗಿರಿನಗರ ಮತ್ತು ದತ್ತಾತ್ರೇಯ ದೇವಸ್ಥಾನ ಪಕ್ಕ ತಗ್ಗು ಪ್ರದೇಶ ಹಾಗೂ ಸಾರಕ್ಕಿ 6ನೇ ಹಂತ, ಶಾಕಂಬರಿ ನಗರ, ಡಿಜೆ ಹಳ್ಳಿಯ ರಾಜಕಾಲುವೆ ಅಕ್ಕಪಕ್ಕದ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜಲಾವೃತವಾಗಿದೆ.

ಚರಂಡಿ, ರಾಜಕಾಲುವೆಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ಈ ಸಂಬಂಧ ಸ್ಥಳೀಯರು ಪಾಲಿಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರೂ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬಿಬಿಎಂಪಿ ಸಿಬ್ಬಂದಿಯನ್ನು ಕಾದು ಹೈರಾಣಾದ ಸ್ಥಳೀಯರು ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸುತ್ತಿದ್ದಾರೆ. ಮ್ಯಾನ್‌ಹೋಲ್‌ಗಳಲ್ಲಿ ಕಟ್ಟಿಕೊಂಡಿದ್ದ ಕಸ ಹೊರತೆಗೆಯುತ್ತಿದ್ದಾರೆ.

ಸಂಪರ್ಕ ಕಡಿತ:

ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಳೆಗೆ ತಗ್ಗು ಪ್ರದೇಶದ ರಸ್ತೆಗಳ ಚಿತ್ರಣವೇ ಬದಲಾಗಿದೆ. ರೈಲ್ವೆ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ಮುರಿದು ಬಿತ್ತು ಮರ:

ಜೆಪಿ ನಗರದ ಮೊದಲನೇ ಹಂತದಲ್ಲಿ, ಮರದ 2 ದೊಡ್ಡ ಕೊಂಬೆಗಳು ನೆಲಕ್ಕುರುಳಿವೆ. ಪರಿಣಾಮ ಎರಡು ಕಾರುಗಳಿಗೆ ಹಾನಿಯಾಗಿದೆ. ಜಯನಗರ 5ನೇ ಬ್ಲಾಕ್​ನಲ್ಲಿ​​ ಮತ್ತು ಲಗ್ಗೆರೆಯ ರಿಂಗ್​ ರಸ್ತೆಯ 11ನೇ ಕ್ರಾಸ್​ನಲ್ಲಿ ಒಂದು ಮರದ ಕೊಂಬೆ ಮುರಿದು ಬಿದ್ದಿದೆ.

ಶ್ರೀನಿವಾಸನಗರ, ಚಾಮರಾಜಪೇಟೆ, ಆಶ್ರಮ, ಮೆಜೆಸ್ಟಿಕ್, ಕಾರ್ಪೊರೇಷನ್, ಕೆ.ಆರ್​.ಮಾರ್ಕೆಟ್​, ಶಾಂತಿನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಮಳೆಯಾಗುತ್ತಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಎಡಬಿಡದಂತೆ ಮಳೆ ಸುರಿಯುತ್ತಿದೆ. ರಾಜಧಾನಿಯಲ್ಲಿಯೂ ಇನ್ನೆರಡು ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ಕೂಡ ತಿಳಿಸಿದ್ದಾರೆ.

ABOUT THE AUTHOR

...view details