ಬೆಂಗಳೂರು:ಲಾಕ್ಡೌನ್ ಬಳಿಕ ಯಶವಂತಪುರ ಎಪಿಎಂಸಿ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಕೃಷಿ ಮಾರಾಟ ನಿರ್ದೇಶಕರ ಸೂಚನೆಯಂತೆ ಯಶವಂತಪುರ ಮುಖ್ಯ ಪ್ರಾಂಗಣದಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಶುಂಠಿ ವ್ಯಾಪಾರ ಮಾಡಲು ನಿರ್ಧರಿಸಲಾಗಿದೆ.
ಜುಲೈನಿಂದ ಯಶವಂತಪುರ ಎಪಿಎಂಸಿಯಲ್ಲೇ ವ್ಯಾಪಾರ ವಹಿವಾಟು ಆರಂಭ
ದಾಸನಪುರಕ್ಕೆ ಸ್ಥಳಾಂತರವಾಗಿದ್ದ ಎಪಿಎಂಪಿ ಮಾರುಕಟ್ಟೆ ಮತ್ತೆ ಯಶವಂತಪುರದಲ್ಲಿ ಆರಂಭವಾಗಲಿದೆ. ಜುಲೈನಿಂದ ವಾರದಲ್ಲಿ ಮೂರು ದಿನ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.
ಅದರಂತೆ ಯಶವಂತಪುರದಲ್ಲಿ ಮಳಿಗೆ ಹಾಗೂ ಲೈಸನ್ಸ್ ಹೊಂದಿರುವ ವರ್ತಕರು, ಜೂನ್ 30ರವರೆಗೆ, ಮೂರು ದಿನ ಯಶವಂತಪುರದಲ್ಲಿ ಹಾಗೂ ಮೂರು ದಿನ ದಾಸನಪುರದಲ್ಲಿ ವ್ಯಾಪಾರ ನಡೆಸಲು ತೀರ್ಮಾನಿಸಿದ್ದಾರೆ. ಜೂನ್ 30ರ ಬಳಿಕ ಪ್ರತಿನಿತ್ಯ ಯಶವಂತಪುರದ ಆವರಣದಲ್ಲೇ ಆರು ದಿನವೂ ವ್ಯಾಪಾರ ಆರಂಭಿಸಲಿದ್ದಾರೆ. ಸದ್ಯ ಸೋಮವಾರ, ಬುಧವಾರ, ಶನಿವಾರ ಮಾತ್ರ ಯಶವಂತಪುರದಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಂಘ ತೀರ್ಮಾನಿಸಿದೆ.
ದಾಸನಪುರ ಉಪ ಮಾರುಕಟ್ಟೆಯಲ್ಲಿ ಲೈಸನ್ಸ್, ಮಳಿಗೆಯಿರುವ ಅಥವಾ ಮಳಿಗೆ ಇಲ್ಲದೆ ಕೇವಲ ಲೈಸೆನ್ಸ್ ಇದ್ದು, ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ, ಶುಂಠಿ ಮಾರಾಟ ಮಾಡಲು ಇಚ್ಚಿಸುವವರು ವಾರದ ಆರೂ ದಿನವೂ ದಾಸನಪುರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪತ್ರದಲ್ಲಿ ತಿಳಿಸಲಾಗಿದೆ.