ಕರ್ನಾಟಕ

karnataka

By

Published : Jan 30, 2021, 3:03 PM IST

ETV Bharat / city

ಸ್ಮಾರ್ಟ್ ​ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು 6 ತಿಂಗಳ ಗಡುವು

ಸಚಿವರು, ಶಾಸಕರು, ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಇಂದು ನಗರ ಪ್ರದಕ್ಷಿಣೆ ನಡೆಸಿದ ಸಿಎಂ ಯಡಿಯೂರಪ್ಪ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಎಲ್ಲಾ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಗಡುವು ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪ್ರತಿಕ್ರಿಯೆ

ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಸಚಿವರು, ಶಾಸಕರು, ಅಧಿಕಾರಿಗಳ ಜೊತೆ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ಮಾಡಿದ್ದೇನೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು‌ ಪೂರ್ಣವಾಗಿವೆ‌. 29 ಕಾಮಗಾರಿ ಪ್ರಗತಿಯಲ್ಲಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಾಲ್ಕು ಕಾಮಗಾರಿಗಳು ಇವೆ ಎಂದಿದ್ದಾರೆ. ಒಟ್ಟು 939 ಕೋಟಿ ರೂ. ವೆಚ್ಚದ ಕಾಮಗಾರಿ ತೆಗೆದುಕೊಳ್ಳಲಾಗಿದ್ದು, ಈವರೆಗೆ 125ರಿಂದ 130 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಇಂದು ರೇಸ್ ಕೋರ್ಸ್ ರಸ್ತೆ, ರಾಜಾರಾಂ ಮೋಹನ್ ರಾಯ್ ರಸ್ತೆ, ರಾಜಭವನ ರಸ್ತೆ ಸೇರಿದಂತೆ ಹಲವೆಡೆ ಹೋಗಿ ಬಂದಿದ್ದೇನೆ. ಪಾದಚಾರಿ, ಸೈಕಲ್ ಮಾರ್ಗಗಳನ್ನು ಗುಣಮಟ್ಟದಲ್ಲಿ ಮಾಡಿದ್ದಾರೆ. ಕಾಮಗಾರಿ ನೋಡಿದಾಗ ತೃಪ್ತಿ ತಂದಿದೆ. ಟೆಂಡರ್ ಶ್ಯೂರ್ ರಸ್ತೆಗಳನ್ನು 2022ರ ಮಾರ್ಚ್​ನೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಮಾರ್ಚ್ ಇಲ್ಲವೇ ಏಪ್ರಿಲ್​ನಲ್ಲಿ ಮತ್ತೊಮ್ಮೆ ವೀಕ್ಷಣೆ ಮಾಡುತ್ತೇನೆ ಎಂದರು.

ಬೆಂಗಳೂರು ನಗರ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಹಣಕಾಸಿನ ಕೊರತೆಯಾಗದಂತೆ ತ್ವರಿತಗತಿಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ಅಧಿಕಾರಿಗಳು ‌ವಿಶೇಷವಾದ ಆಸಕ್ತಿ ವಹಿಸಿ‌ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿ ಒಳ್ಳೆಯ ಗುಣಮಟ್ಟದಲ್ಲಿ ಮಾಡಿದ್ದಾರೆ‌. ಇಂದು ಪರಿಶೀಲನೆ ನಡೆಸಿದ ಎಲ್ಲಾ ರಸ್ತೆಗಳನ್ನು ಆರು ತಿಂಗಳಲ್ಲಿ ಪೂರ್ಣ ಮಾಡಲು ಹೇಳಿದ್ದೇನೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ 37 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ರಸ್ತೆ ಅಭಿವೃದ್ಧಿ, ಕೋವಿಡ್ ಆಸ್ಪತ್ರೆಗಳಿಗೆ ನೆರವು, ಐಟಿ ಯೋಜನೆಗಳು, ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿಗಳು ಸೇರಿವೆ ಎಂದರು.

ABOUT THE AUTHOR

...view details