ಬೆಂಗಳೂರು:ಇನ್ನೇನು ಹೊಸ ವರ್ಷ 2022 ಬಂದೇ ಬಿಟ್ಟಿತು. ಆದರೆ ಈ ವರ್ಷ ಕೊರೊನಾ ಆತಂಕದ ನಡುವೆ ಹಲವು ರೀತಿಯ ಸಂಕಷ್ಟವನ್ನು ನಾವು ಎದುರಿಸಿದ್ದೇವೆ. ಇದೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳೂ ನಡೆದಿವೆ. ನಾನಾ ಕಾರಣಗಳಿಂದ ನಗರದಲ್ಲಿ ವರದಿಯಾದ ಅಪರಾಧಗಳ ಜೊತೆಗೆ ಭೀಕರ ಅಪಘಾತಗಳು ಸಂಭವಿಸಿವೆ.
1. ರಾಸಲೀಲೆ ಸಿಡಿ ಪ್ರಕರಣ:
ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಅಧಿಕಾರ ಪ್ರಭಾವ ಬಳಸಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಗಂಭೀರ ಆರೋಪ ಮಾಡಿದರೆ, ವೈರಲ್ ಆಗಿರುವ ವಿಡಿಯೋ ನನ್ನದಲ್ಲ ಎಂದು ಮಾಜಿ ಸಚಿವರು ಮೊದಲಿಗೆ ದೂರು ನೀಡಿದ್ದರು. ನಂತರ ಎಸ್ಐಟಿ ವಿಚಾರಣೆ ವೇಳೆ ವಿಡಿಯೊದಲ್ಲಿರುವುದು ನಾನೇ ಎಂದು ಹೇಳಿಕೆ ನೀಡಿದ್ದರು. ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸದ್ಯ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
2. ಬಿಟ್‌ಕಾಯಿನ್ ಕೇಸ್:
ಸರ್ಕಾರಿ ವೆಬ್‌ಸೈಟ್ ಸೇರಿದಂತೆ ಇನ್ನಿತರೆ ಆ್ಯಪ್ಗಳನ್ನು ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಯ ಬಿಟ್‌ಕಾಯಿನ್ ಅವ್ಯವಹಾರ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತು. ಬಿಟ್‌ಕಾಯಿನ್ ಅವ್ಯವಹಾರದ ಹಿಂದೆ ಬಿಜೆಪಿ ಸಚಿವರು ಹಾಗೂ ಐಪಿಎಸ್ ಅಧಿಕಾರಿಗಳ ಕೈವಾಡವಿರುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಬಿಜೆಪಿಯವರು ಸಹ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದರು. ಸರ್ಕಾರದ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಇ-ಪ್ರೊಕ್ಯರ್ಮೆಂಟ್ ಜಾಲತಾಣ ಹ್ಯಾಕ್ ಮಾಡಿರುವ ಶ್ರೀಕಿ 9 ಕೋಟಿ ರೂ. ಹಣ ಲಪಾಟಾಯಿಸಿದ ಆರೋಪ ಎದುರಿಸುತ್ತಿದ್ದಾನೆ. ಚೀನಿ ಆ್ಯಪ್ ಸೇರಿದಂತೆ ಪೋಕರ್ ಗೇಮ್ಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಕಳೆದ ನವೆಂಬರ್‌ನಲ್ಲಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬಂಧನಕ್ಕೂ ಒಳಗಾಗಿ ಇದೀಗ ಜಾಮೀನು ಪಡೆದು ಹೊರಬಂದಿದ್ದಾನೆ.
3. ರೇಖಾ ಕದಿರೇಶ್ ಹತ್ಯೆ:
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ರಾಜಕೀಯ ಹಾಗೂ ಹಣಕಾಸಿನ ಕಾರಣಕ್ಕಾಗಿ ಸಂಬಂಧಿಕರು ಹಾಗೂ ಪರಿಚಯಸ್ಥರೇ ಜೂನ್ 24 ರಂದು ಮಾರಕಾಸ್ತ್ರಗಳಿಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ರೌಡಿಶೀಟರ್ ಮಾಲಾ, ಸೂರ್ಯ, ಪೀಟರ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಕಾಟನ್‌ಪೇಟೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.
4. ಎರಡು ಸಾವಿರಕ್ಕೂ ಹೆಚ್ಚು ರೌಡಿಗಳ ಮೇಲೆ ದಾಳಿ:
ನಗರದ 8 ವಿಭಾಗಗಳಲ್ಲಿ ಕಳೆದ ಜುಲೈನಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿಶೀಟರ್ಗಳ ಮೇಲೆ ದಾಳಿ ನಡೆಸಲಾಗಿತ್ತು. ಮನೆಯಲ್ಲಿದ್ದ ಮಾರಕಾಸ್ತ್ರಗಳು, ಮಾದಕ ವಸ್ತುಗಳೂ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಕೊಲೆಯತ್ನ, ದರೋಡೆ, ಹಫ್ತಾ ವಸೂಲಿ, ಸುಲಿಗೆ ಹಾಗೂ ಡ್ರಗ್ಸ್ ದಂಧೆ ಸೇರಿದಂತೆ ಇನ್ನಿತರೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ನಗರದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದರು.