ಬೆಂಗಳೂರು:ಮಧ್ಯಾಹ್ನದ ನಂತರ ಸದನ ಆರಂಭವಾಗುತ್ತಿದ್ದ ಹಾಗೇ ಕಾಂಗ್ರೆಸ್ ಸದಸ್ಯರು ದೊರೆಸ್ವಾಮಿ ವಿರುದ್ಧದ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ತಮ್ಮ ಧರಣಿಯನ್ನು ಮುಂದುವರಿಸಿದರು.
ಯತ್ನಾಳ್ ಹೇಳಿಕೆ: ಮುಂದುವರಿದ ಕೈ ಶಾಸಕರ ಧರಣಿ, ಗದ್ದಲದ ಮಧ್ಯೆ ವಿಧೇಯಕ ಮಂಡನೆ ಈ ವೇಳೆ ದೊರೆಸ್ವಾಮಿ ವಿರುದ್ಧದ ಹೇಳಿಕೆ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪಟ್ಟನ್ನು ಮುಂದುವರಿಸಿದರು. ಈ ಮಧ್ಯೆ ಸ್ಪೀಕರ್ ಮಾತನಾಡಿ ಈ ಸಂಬಂಧ ನೋಟಿಸ್ ನೀಡದೇ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು. ಹೀಗಾಗಿ ನೋಟಿಸ್ ನೀಡುವಂತೆ ಕೋರಿದರು. ಸಭಾಧ್ಯಕ್ಷರ ವಿಶೇಷಾಧಿಕಾರ ಬಳಸಿ ಈ ಕುರಿತು ಚರ್ಚೆಗೆ ಅವಕಾಶ ಕೊಡಲು ಅಸಾಧ್ಯ. ಯಾವುದಾದರೊಂದು ರೀತಿಯಲ್ಲಿ ನನಗೆ ಚರ್ಚೆಗೆ ಕೋರಿ ಲಿಖಿತ ನೋಟಿಸ್ ಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯತ್ನಾಳ್ ಹೇಳಿಕೆ ಕುರಿತ ಚರ್ಚೆ ಗಂಭೀರವಾಗಿದೆ. ಸದನದಲ್ಲಿ ಬಿಟ್ಟರೆ ಬೇರೆಲ್ಲೂ ಇದರ ಬಗ್ಗೆ ಚರ್ಚೆ ಅಸಾಧ್ಯ. ಅವರು ದೊರೆಸ್ವಾಮಿಯವರನ್ನು ಪಾಕಿಸ್ತಾನದ ಏಜೆಂಟ್ ಎಂದು ಕರೆದಿದ್ದಾರೆ. ಹೀಗಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿದಾಗ, ಆಡಳಿತ ಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ವಾಗ್ವಾದ ನಡೆಯಿತು. ಬಿಜೆಪಿ ಶಾಸಕರು ಭಾರತ್ ಮಾತಾಕಿ ಜೈ, ಸಾವರ್ಕರ್ ಕಿ ಜೈ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಸಂವಿಧಾನ ಉಳಿಸಿ ಎಂದು ಘೋಷಣೆ ಕೂಗಿದರು.
ಈ ವೇಳೆ ಮಧ್ಯಪ್ರವೇಶಿದ ಸಿಎಂ ನಾವು ಚರ್ಚೆಗೆ ಸಿದ್ಧರಿದ್ದೇವೆ. ನಿಯಮದ ಪ್ರಕಾರ ನೋಟಿಸ್ ಕೊಡಿ. ನೀವು ಈ ಸಂಬಂಧ ಏನು ಬೇಕಾದರೂ ಚರ್ಚೆ ಮಾಡಿ, ನಾವು ಉತ್ತರ ಕೊಡುತ್ತೇವೆ ಎಂದು ಮನವಿ ಮಾಡಿದರು. ಇದಕ್ಕೆ ಪಟ್ಟು ಬಿಡದ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಎದ್ದುನಿಂತು ಸಿದ್ದರಾಮಯ್ಯ ಮೋದಿಯವರನ್ನು ಕೊಲೆಗಡುಕ ಎಂದಿದ್ದರು, ಹಾಗಾಗಿ ಅವರನ್ನೂ ಸದನದಿಂದ ಹೊರಗೆ ಹಾಕಿ, ಉಚ್ಛಾಟಿಸಿ ಎಂದು ಒತ್ತಾಯಿಸಿದರು.
ಬಳಿಕ ಗದ್ದಲದ ಮಧ್ಯೆ ಸ್ಪೀಕರ್ ಎಂಟು ವಿಧೇಯಕಗಳ ಮಂಡನೆಗೆ ಅನುಮತಿ ನೀಡಿದರು.