ಬೆಂಗಳೂರು: ನಾಳೆ ಬಹುನಿರೀಕ್ಷಿತ ಉಪಸಮರದ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿಷ್ಠಿತ ಕಣ ಯಶವಂತಪುರ ಕ್ಷೇತ್ರದ ಉಪಕದನದಲ್ಲಿ ಮತದಾರ ಪ್ರಭು ಯಾರಿಗೆ ಮಣೆ ಹಾಕಿದ್ದಾನೆ ಎಂಬುದು ನಾಳೆ ಗೊತ್ತಾಗಲಿದೆ. ಇತ್ತ ಮತ ಎಣಿಕೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದ ಹಾಗೆ ಅತ್ತ ಕಣದಲ್ಲಿನ ಅಭ್ಯರ್ಥಿಗಳ ಹೃದಯ ಬಡಿತವೂ ಹೆಚ್ಚಾಗಿದೆ.
ನಾಳೆ ಯಶವಂತಪುರ ರಣಕಣದ ಕಲಿ ಯಾರು? ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರೆ, ಬಿಜೆಪಿ ಅಭ್ಯರ್ಥಿ ಎಸ್. ಟಿ. ಸೋಮಶೇಖರ್, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಹಾಗೂ ಕಾಂಗ್ರೆಸ್ ನ ಪಿ. ನಾಗರಾಜ್ ಪ್ರಮುಖರಾಗಿದ್ದಾರೆ. ಆದರೆ, ಜಿದ್ದಾಜಿದ್ದು ಇರುವುದು ಬಿಜೆಪಿಯ ಎಸ್.ಟಿ.ಸೋಮಶೇಖರ್ ಹಾಗು ಜೆಡಿಎಸ್ ನ ಜವರಾಯಿಗೌಡರ ಮಧ್ಯೆ.
ಇಬ್ಬರು ಅಭ್ಯರ್ಥಿಗಳೂ ಬಿರುಸಿನ ಪ್ರಚಾರ ನಡೆಸಿ, ಶತಾಯಗತಾಯ ಗೆಲುವಿಗೆ ಭಾರಿ ಕಸರತ್ತು ನಡೆಸಿದ್ದರು. ತಮ್ಮ ಪಕ್ಷಗಳ ಘಟಾನುಘಟಿ ನಾಯಕರಿಂದ ಮತಬೇಟೆ ಮಾಡಿರುವ ಅಭ್ಯರ್ಥಿಗಳು, ಗೆಲುವಿಗೆ ಬೇಕಾದ ರಣತಂತ್ರಗಳನ್ನೂ ಅನುಸರಿಸಿದ್ದರು. ಅನರ್ಹತೆ ಹಣೆಪಟ್ಟಿ ಕಳಚಿ, ರಾಜಕೀಯ ಭವಿಷ್ಯ ನಿರ್ಧರಿಸಲು ಎಸ್. ಟಿ. ಸೋಮಶೇಖರ್ ಗೆ ಗೆಲುವು ಅನಿವಾರ್ಯವಾಗಿದೆ.