ಬೆಂಗಳೂರು:ಹಿಜಾಬ್ ಪ್ರಕರಣದ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ಸೇರಿ ಮೂವರು ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಿದ್ದು, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ಕರೆತಂದು ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಾಧೀಶರ ಮೇಲೆ ಬೆದರಿಕೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ. ಕೆಲವು ದೇಶದ್ರೋಹಿ ಶಕ್ತಿಗಳು ಈ ದೇಶದ ವ್ಯವಸ್ಥೆಗೆ ಸವಾಲು ಹಾಕುವ ಪ್ರಯತ್ನ ಮಾಡಿವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ನ್ಯಾಯಾಂಗದಲ್ಲಿ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ತೀರ್ಪು ಸರಿ ಅನ್ನಿಸದಿದ್ದರೆ ಮೇಲ್ಮನವಿ ಸಲ್ಲಿಸುವ ಎಲ್ಲಾ ವ್ಯವಸ್ಥೆ ಇದೆ. ಇಷ್ಟೆಲ್ಲ ಇದ್ದರೂ ವಿಛಿದ್ರಕಾರಿ ಶಕ್ತಿಗಳು ಈ ರೀತಿ ಹೇಳಿಕೆ ಕೊಟ್ಟು ಜನರನ್ನು ಬಡಿದೆಬ್ಬಿಸಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಇಂತಹ ಎಲ್ಲಾ ಶಕ್ತಿಗಳನ್ನು ನಾವು ಸಹಿಸಲು ಸಾಧ್ಯವಿಲ್ಲ, ದಮನ ಮಾಡಬೇಕಿದೆ ಎಂದರು.
ಈಗಾಗಲೇ ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಬಾರ್ ಅಸೋಸಿಯೇಷನ್ನವರು ಬಂದು ದೂರು ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಡಿಜಿಗೆ ಆದೇಶ ಕೊಟ್ಟಿದ್ದೇನೆ. ಕೂಡಲೇ ವಿಧಾನಸೌಧ ಪ್ರಕರಣವನ್ನು ತನಿಖೆ ಮಾಡಬೇಕು ಮತ್ತು ತಮಿಳುನಾಡಿನಲ್ಲಿ ದಾಖಲಾದ ಪ್ರಕರಣ ಕುರಿತು ಏನು ಮಾಡಿದ್ದಾರೆ ಅದೆಲ್ಲಾ ನೋಡಿ ಆರೋಪಿಗಳನ್ನು ನಮ್ಮ ವಶಕ್ಕೆ ಪಡೆಯಬೇಕು ಮತ್ತು ಕಠಿಣವಾದ ಸೆಕ್ಷನ್ಗಳನ್ನು ಹಾಕಿ ಕೇಸುಗಳನ್ನು ನಡೆಸಬೇಕು ಎಂದು ಆದೇಶ ಕೊಟ್ಟಿದ್ದೇನೆ. ತೀರ್ಪನ್ನು ಕೊಟ್ಟಂತಹ ಮೂವರು ನ್ಯಾಯಾಧೀಶರಿಗೆ ಈಗಿರುವ ಭದ್ರತೆಯನ್ನು ಹೆಚ್ಚಿಸಬೇಕು. ವೈ ಕೆಟಗರಿಯ ಭದ್ರತೆಯನ್ನು ಕೊಡಬೇಕು ಎನ್ನುವ ತೀರ್ಮಾನವನ್ನು ಸರ್ಕಾರ ಮಾಡಿದೆ ಎಂದರು.
'ಡೋಂಗಿ ಸೆಕ್ಯುಲರ್ಗಳೇ ಮೌನವೇಕೆ?':ಸ್ವಯಂಘೋಷಿತ ಡೋಂಗಿ ಸೆಕ್ಯುಲರ್ಗಳು ಯಾಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಘಟನೆ ನಡೆದು ಮೂರ್ನಾಲ್ಕು ದಿನವಾಗಿದೆ. ಅವರೆಲ್ಲಾ ಯಾಕೆ ಮೌನವಾಗಿದ್ದಾರೆ. ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಮಾಡುತ್ತಿದ್ದಾರೆ. ಮತ್ತೆ ಅವರು ಮಾಡುವ ಮುಂದಿನ ಕೃತ್ಯಗಳ ಬಗ್ಗೆ ಸುಳಿವನ್ನು ಕೊಟ್ಟಿದ್ದಾರೆ. ನ್ಯಾಯಾಧೀಶರಗೆ ಅಪಘಾತವಾದರೆ ನಾವು ಜವಾಬ್ದಾರಿಯಲ್ಲ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಯಾಕೆ ಮೌನವಾಗಿದ್ದಾರೆ? ಬೇರೆ ವಿಷಯದಲ್ಲಿ ಬಹಳ ದೊಡ್ಡ ದನಿ ಎತ್ತುತ್ತೀರಿ. ಈಗ ಒಂದು ವರ್ಗದ ಜನಕ್ಕೆ ಇಷ್ಟು ಓಲೈಸುವುದು ಜಾತ್ಯತೀತತೆ ಅಲ್ಲ. ಇದು ನಿಜವಾದ ಕೋಮುವಾದ. ಇದನ್ನು ನಾನು ಖಂಡಿಸುತ್ತೇನೆ ಎಂದರು.