ಬೆಂಗಳೂರು:ಶಿಯೋಮಿ ಇಂಡಿಯಾ ಕಂಪನಿಯ 4 ಬ್ಯಾಂಕ್ ಖಾತೆಗಳಲ್ಲಿರುವ 5,551 ಕೋಟಿ ರೂಪಾಯಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವ ಜಾರಿ ನಿರ್ದೇಶನಾಲಯದ (ಇಡಿ) ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದಿನ ವಿಚಾರಣೆವರೆಗೂ ವಿಸ್ತರಿಸಿದೆ. ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳು ಸಂಬಂಧ ಇಡಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಬೆಂಗಳೂರಿನ ಮಾರತಹಳ್ಳಿಯ ಟೆಕ್ ಗ್ರಾಮದಲ್ಲಿರುವ ಶಿಯೋಮಿ ಸಂಸ್ಥೆ ಪ್ರತಿನಿಧಿ ಸಮೀರ್ ಬಿ.ಎಸ್.ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಜಿ ಪಂಡಿತ್ ಅವರಿದ್ದ ಏಕಸದಸ್ಯ ಪೀಠ ಈ ತಡೆಯಾಜ್ಞೆ ವಿಸ್ತರಿಸಿದೆ.
ವಿಚಾರಣೆ ವೇಳೆ ಇಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ವಾದಿಸಿ, ಶಿಯೋಮಿ ಕಂಪನಿಯವರು ನಿನ್ನೆಯಷ್ಟೇ ಆಕ್ಷೇಪಣೆ ಪ್ರತಿಯನ್ನು ಸಲ್ಲಿಸಿದ್ದಾರೆ. ಸುಮಾರು 350 ಪುಟಗಳಷ್ಟು ಪ್ರತಿಕ್ರಿಯೆ ಸಲ್ಲಿಸಿದ್ದು ಇನ್ನೂ ಪರಿಶೀಲಿಸಿಲ್ಲ ಎಂದು ತಿಳಿಸಿದರು. ಹೇಳಿಕೆ ಪರಿಗಣಿಸಿದ ಪೀಠ, ಈ ಹಿಂದಿನ ತಡೆಯಾಜ್ಞೆ ಆದೇಶವನ್ನು ಜೂನ್ 1ರವರೆಗೂ ವಿಸ್ತರಿಸಿತಲ್ಲದೇ, ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿತು.