ಕರ್ನಾಟಕ

karnataka

ETV Bharat / city

ವಿಶ್ವ ಆರೋಗ್ಯ ದಿನದ ಪ್ರಯುಕ್ತ ಸಚಿವ ಸುಧಾಕರ್ ಮಾಡಿದ ಪ್ರತಿಜ್ಞೆ ಮಾದರಿ.. ಯಾಕೆ ಇಲ್ನೋಡಿ.. - Minister sudakar

ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ನೇತ್ರದಾನವಾಗಬೇಕು. ಹೀಗಾಗಿ, ವ್ಯಕ್ತಿ ಮರಣ ಹೊಂದಿದ ಕೂಡಲೇ ಸಂಬಂಧಿಕರು ನೇತ್ರ ಆಸ್ಪತ್ರೆಗೆ ಅಥವಾ ನೇತ್ರ ಪಡೆಯುವ ಆಸ್ಪತ್ರೆಗೆ ಈ ಕುರಿತು ಮಾಹಿತಿ ನೀಡಬೇಕು. ಇಂತಹ ವಿಚಾರಗಳ ಬಗ್ಗೆ ಜನರು ಅರಿಯಬೇಕು. ನೇತ್ರದಾನ ಮಹಾದಾನ ಎಂಬ ಬಗ್ಗೆ ಜಾಗೃತರಾಗಬೇಕು ಎಂದು ಸಚಿವರು ಕೋರಿದರು..

Minister sudakhar
Minister sudakhar

By

Published : Apr 7, 2021, 7:57 PM IST

ಬೆಂಗಳೂರು: ವಿಶ್ವ ಆರೋಗ್ಯ ದಿನದಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡು ನೇತ್ರದಾನದ ಮಹತ್ವ ಸಾರಿದರು. ವಿಶ್ವ ಆರೋಗ್ಯ ದಿನದ ಪ್ರಯುಕ್ತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಧಾಕರ್ ಪಾಲ್ಗೊಂಡಿದ್ದರು.

ನೇತ್ರದಾನ ಮಾಡಿದ ಆರೋಗ್ಯ ಸಚಿವ ಡಾ. ಸುಧಾಕರ್‌

ಇದೇ ಸಮಯದಲ್ಲಿ ಸಚಿವ ಡಾ.ಕೆ.ಸುಧಾಕರ್ ಮಿಂಟೋ ಆಸ್ಪತ್ರೆಗೆ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡರು. ಮಿಂಟೋ ನಿರ್ದೇಶಕಿ ಡಾ.ಸುಜಾತ ರಾಥೋಡ್ ಸಚಿವರಿಗೆ ಹೆಸರು ನೋಂದಾಯಿಸಿಕೊಂಡ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.

ಈ ಕುರಿತು ಅಭಿಪ್ರಾಯ ಹಂಚಿಕೊಂಡ ಸಚಿವ ಡಾ.ಕೆ.ಸುಧಾಕರ್, ವಿಶ್ವ ಆರೋಗ್ಯ ದಿನವಾದ ಇಂದು ನೇತ್ರದಾನ ಮಾಡುವ ಸಂಕಲ್ಪ ಕೈಗೊಂಡಿರುವುದು ಸಾರ್ಥಕ ಭಾವ ಮೂಡಿಸಿದೆ. ಕಣ್ಣುಗಳು ನಮ್ಮ ಜೀವಿತಾವಧಿಯ ನಂತರ ಮತ್ತೊಬ್ಬ ಜೀವಿಯ ಬದುಕಲ್ಲಿ ಬೆಳಲು ಮೂಡಿಸಲು ನೆರವಾಗಬಹುದು ಎಂದು ಹೇಳಿದರು.

ಪ್ರತಿಯೊಬ್ಬರು ನೇತ್ರದಾನ ಮಾಡುವ ಸಂಕಲ್ಪ ತೊಡಬೇಕೆಂದು ನಾನು ಮನವಿ ಮಾಡುತ್ತೇನೆ. ಪ್ರತಿ ಜೀವಿಗೂ ದೃಷ್ಟಿ ಅತ್ಯಮೂಲ್ಯವಾಗಿದೆ. ನಾವು ಮಾಡುವ ನೇತ್ರದಾನವು ಇನ್ನೊಬ್ಬರಿಗೆ ವರವಾಗಿ ಪರಿಣಮಿಸುತ್ತದೆ.

ಆದ್ದರಿಂದ ನಾವೆಲ್ಲರೂ ತಪ್ಪದೇ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡು ಇನ್ನೊಬ್ಬರ ಬಾಳಿನಲ್ಲಿ ಬೆಳಕು ಮೂಡಿಸುವ ಕೆಲಸ ಮಾಡೋಣ. ಈ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂದು ಆರೋಗ್ಯ ಸಚಿವ ಸಾರ್ವಜನಿಕರಿಗೆ ಮನವಿ ಮಾಡಿದರು.

ಭಾರತದಲ್ಲಿ ಒಂದು ವರ್ಷದಲ್ಲಿ ಸುಮಾರು 40 ಸಾವಿರ ಕಣ್ಣಿನ ದಾನ ನಡೆಯುತ್ತಿದೆ. ಈ ಪೈಕಿ ಸುಮಾರು 30-35 ಸಾವಿರ ಕಣ್ಣುಗಳು ಮಾತ್ರ ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿವೆ. ಸುಮಾರು 5 ಸಾವಿರದಷ್ಟು ಕಣ್ಣುಗಳನ್ನು ನಾನಾ ಕಾರಣಗಳಿಂದಾಗಿ ಕಸಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ನೇತ್ರದಾನವಾಗಬೇಕು. ಹೀಗಾಗಿ, ವ್ಯಕ್ತಿ ಮರಣ ಹೊಂದಿದ ಕೂಡಲೇ ಸಂಬಂಧಿಕರು ನೇತ್ರ ಆಸ್ಪತ್ರೆಗೆ ಅಥವಾ ನೇತ್ರ ಪಡೆಯುವ ಆಸ್ಪತ್ರೆಗೆ ಈ ಕುರಿತು ಮಾಹಿತಿ ನೀಡಬೇಕು. ಇಂತಹ ವಿಚಾರಗಳ ಬಗ್ಗೆ ಜನರು ಅರಿಯಬೇಕು. ನೇತ್ರದಾನ ಮಹಾದಾನ ಎಂಬ ಬಗ್ಗೆ ಜಾಗೃತರಾಗಬೇಕು ಎಂದು ಸಚಿವರು ಕೋರಿದರು.

ನೇತ್ರದಾನಕ್ಕೆ ಮುಂಚಿತವಾಗಿಯೇ ಹೆಸರು ನೋಂದಾಯಿಸಿಕೊಳ್ಳಬೇಕು. ನೇತ್ರ ಪಡೆಯುವಾಗ ಸಂಗ್ರಹ ಕೇಂದ್ರ ಅಥವಾ ಆಸ್ಪತ್ರೆ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಜನರು ತಮ್ಮ ಅಮೂಲ್ಯ ಕಣ್ಣುಗಳನ್ನು ದಾನ ಮಾಡಲು ನೋಂದಾಯಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು.

ABOUT THE AUTHOR

...view details