ಕರ್ನಾಟಕ

karnataka

ಅನ್​ಲಾಕ್ 3: ಮತ್ತೆ ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿರುವ ಜನ

By

Published : Jul 4, 2021, 5:41 PM IST

ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆ ಊರಿನ ಕಡೆ ಮುಖ ಮಾಡಿದ್ದ ಕೆಲಸಗಾರರು ಇದೀಗ ಸರ್ಕಾರ ಅನ್​ಲಾಕ್ 3 ಘೋಷಿಸಿದ್ದರಿಂದ ಮತ್ತೆ ಬೆಂಗಳೂರಿನತ್ತ ವಾಪಸ್ಸಾಗುತ್ತಿದ್ದಾರೆ‌.

Workers returning to benglure
ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿರುವ ಜನ

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಅನ್​ಲಾಕ್ 3 ಜಾರಿಯಾಗುತ್ತಿದ್ದು ಬಹುತೇಕ ಬೆಂಗಳೂರು ಸಹಜ ಸ್ಥಿತಿಯತ್ತ ಮರಳಲಿದೆ. ಹಾಗಾಗಿ ಎರಡನೇ ಅಲೆಯಿಂದ ತತ್ತರಗೊಂಡು ನಗರ ತೊರೆದಿದ್ದ ಜನ ಇದೀಗ ಮತ್ತೆ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ.

ನಾಳೆ ಬೆಳಗ್ಗೆಯಿಂದ ರಾಜ್ಯದಲ್ಲಿ ಅನ್​ಲಾಕ್ 3ರಂತೆ ನೂತನ ಮಾರ್ಗಸೂಚಿ ಜಾರಿಯಾಗಲಿದೆ. ಮಾಲ್​ಗಳನ್ನು ತೆರೆಯಲು ಸರ್ಕಾರ ಸಮ್ಮತಿ ನೀಡಿದ್ದು, ನಾಳೆಯಿಂದ ಬೆಂಗಳೂರಿನಲ್ಲಿರುವ 200ಕ್ಕೂ ಹೆಚ್ಚು ಮಾಲ್​ಗಳು ತೆರೆಯಲಿವೆ. ಈಗಾಗಲೇ ಬಸ್ ಸಂಚಾರಕ್ಕೆ ಅವಕಾಶ ಸಿಕ್ಕಿದ್ದು, ನಾಳೆಯಿಂದ ಮಾಲ್​ಗಳು ಕೂಡ ಓಪನ್ ಆಗುತ್ತಿರುವುದಕ್ಕೆ ಕರ್ತವ್ಯಕ್ಕೆ ಮರಳಲು ಸಿಬ್ಬಂದಿ ಬೆಂಗಳೂರು ಹಾದಿ ಹಿಡಿದಿದ್ದಾರೆ.

ಇನ್ನು ಬಾರ್​ಗಳಿಗೂ ಅನುಮತಿ ಸಿಕ್ಕಿರುವುದರಿಂದ ನಾಳೆಯಿಂದ ನಗರದಲ್ಲಿರುವ ಎಲ್ಲಾ ಬಾರ್ ಆ್ಯಂಡ್‌ ರೆಸ್ಟೋರೆಂಟ್​ಗಳು ತೆರೆಯಲಿವೆ. ಅದರಲ್ಲಿ ಕೆಲಸ ಮಾಡುವವರು ಸಹ ಕೆಲಸಕ್ಕೆ ಹಾಜರಾಗಲು ಬೆಂಗಳೂರಿಗೆ ಬರುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಮರಳುತ್ತಿದ್ದಾರೆ.

ಕಲ್ಯಾಣ ಮಂಟಪಗಳಿಗೆ ಅನ್​ಲಾಕ್‌ 3 ರಲ್ಲಿ ಸಿಹಿ ಸುದ್ದಿ ಸಿಕ್ಕಿದ್ದು, ಮದುವೆ ಸಮಾರಂಭಕ್ಕೆ ಇದ್ದ 40 ಜನರ ಮಿತಿಯನ್ನು 100 ಜನಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಗಳು ಮುಂದುವರೆಯಲಿವೆ. ಸೀಮಿತ ಜನರನ್ನು ಸೇರಿಸಲು ಅವಕಾಶವಿರುವ ಕಾರಣ ಜನರು ಮದುವೆಯ ಮಾಡಲು ಕಲ್ಯಾಣ ಮಂಟಪಗಳಿಗೆ ಬರಲಿದ್ದು, ಕಲ್ಯಾಣ ಮಂಟಪಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಮತ್ತೆ ಕೆಲಸ ಸಿಕ್ಕಂತಾಗಿದೆ.

ಇನ್ನು ಬಸ್, ಮೆಟ್ರೋದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ, ಆಟೋ, ಕ್ಯಾಬ್​ಗೆ ಅನುಮತಿ, ಇಡೀ ದಿನ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿರುವುದರಿಂದ ಬೆಂಗಳೂರು ಬಹುತೇಕ ಸಹಜ ಸ್ಥಿತಿಗೆ ಬರಲಿದೆ. ಹಾಗಾಗಿ ಬೆಂಗಳೂರಿನಿಂದ ಹೊರ ಹೋಗಿದ್ದ ವಲಸಿಗರು ಮತ್ತೆ ರಾಜಧಾನಿ ಕಡೆ ಉದ್ಯೋಗ ಅರಸಿ ಬರುತ್ತಿದ್ದಾರೆ.

ABOUT THE AUTHOR

...view details