ಬೆಂಗಳೂರು:ಕಲಬುರಗಿಯ ಜಿಲ್ಲೆಯ ಸೇಡಂ ತಾಲೂಕಿನ ಶಾಸಕರೊಬ್ಬರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ ಮಹಿಳೆಗೆ ಭದ್ರತೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರು ಮಹಿಳೆಗೆ ಭದ್ರತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆ ಮಹಿಳೆಗೆ ಸರ್ಕಾರಿಂದ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು.
ಗೃಹ ಸಚಿವರಿಗೆ ಮನವಿ ಪತ್ರ ನೀಡಿದ ಬಳಿಕ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಮಾತನಾಡಿ, ಮಹಿಳೆಯೊಬ್ಬರಿಗೆ ಶಾಸಕರಿಂದ ಅನ್ಯಾಯವಾಗಿದೆ ಎಂದು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದ ಬಳಿಕ ಆಯೋಗವು ಈ ಬಗ್ಗೆ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ.
ಅಲ್ಲದೇ, ಈ ಬಗ್ಗೆ ಪೊಲೀಸ್ ಆಯುಕ್ತರು, ಐಜಿಪಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆಯಲಾಗಿದೆ. ಮಹಿಳೆಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಂಡಿದ್ದೇನೆ. ಸುಮೋಟೋ ಕೇಸ್ ಕುರಿತು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರಿಗೂ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.