ದೊಡ್ಡಬಳ್ಳಾಪುರ :ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಾರ್ಫ್ ನರ್ಸ್ ಮತ್ತು ಅಕೌಂಟೆಂಟ್ ನಡುವೆ ಪ್ರೇಮಾಂಕುರವಾಗಿತ್ತು. ಎರಡು ಕುಟುಂಬಗಳ ನಡುವೆ ಮದುವೆ ಮಾತುಕತೆ ಸಹ ನಡೆದಿತ್ತು. ಆದರೆ, ಇಂದು ಬೆಳಿಗ್ಗೆ ಪ್ರಿಯಕರನೇ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪಕ್ಕದ ಮನೆಯ ನಿವಾಸಿ ದೊಡ್ಡಬಳ್ಳಾಪುರ ನಗರದ ಯೋಗಿ ನಾರಾಯಣ ಬಡಾವಣೆಯಲ್ಲಿ ಇಂದು ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಪಾಗಲ್ ಪ್ರೇಮಿ ಗಿರೀಶ್ನನ್ನು ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಕು ಇರಿತಕ್ಕೆ ಒಳಗಾದ ನರ್ಸ್ ಪ್ರಭಾವತಿ.ಡಿ (26) ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರು ಮೂಲದ ಪ್ರಭಾವತಿ.ಡಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಟಾರ್ಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ನಗರದ ಯೋಗಿ ನಾರಾಯಣ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ತಮ್ಮ ಜತೆ ವಾಸವಾಗಿದ್ದಳು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇದೇ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿದ್ದ ಗಿರೀಶ್ ಜತೆ ಪ್ರೇಮಾಂಕುರವಾಗಿತ್ತು.
ಇಬ್ಬರ ಪ್ರೀತಿಯ ವಿಷಯ ಎರಡು ಕುಟುಂಬಕ್ಕೂ ತಿಳಿದಿದ್ದು, ಮದುವೆ ಮಾತುಕತೆ ಸಹ ನಡೆದಿತ್ತು. ಆದರೆ, ಇಂದು ಬೆಳಗ್ಗೆ ಪ್ರಭಾವತಿ ಮನೆಗೆ ಬಂದ ಗಿರೀಶ್ ಆಕೆಯ ಹೊಟ್ಟೆ, ಕುತ್ತಿಗೆ, ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಪ್ರಭಾವತಿಯ ಕೂಗಾಟ ಕೇಳಿದ ಪಕ್ಕದ ಮನೆಯರು ಹೋದಾಗ ಮನೆಯ ಒಳಗಿನಿಂದ ಲಾಕ್ ಮಾಡಲಾಗಿತ್ತು.
ಕಿಟಕಿಯನ್ನು ತೆರೆದು ನೋಡಿದಾಗ ಗಿರೀಶ್ ಮನೆಯಲ್ಲಿಯೇ ಇದ್ದ. ಆತನೇ ಬಾಗಿಲು ತೆಗೆದು ಹೊರ ಬಂದಿದ್ದಾನೆ. ಒಳ ಹೋಗಿ ನೋಡಿದಾಗ ಪ್ರಭಾವತಿ ರಕ್ತದ ಮಡುವಿನಲ್ಲಿ ಬಿದ್ದಿದರು. ತಕ್ಷಣವೇ ಅವರನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಚಾಕು ಇರಿದು ಪರಾರಿಯಾಗಿದ್ದ ಗಿರೀಶ್‌ನನ್ನ ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಭಾವತಿ ಮತ್ತೊಬ್ಬ ಹುಡುಗನ ಜತೆ ಸಲುಗೆಯಿಂದ ಇದ್ದದ್ದು, ಘಟನೆಗೆ ಕಾರಣ ಎನ್ನಲಾಗ್ತಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಕಣ್ಮುಂದೆ ಕೊಲೆ ಆಗ್ತಿದ್ರು ಸುಮ್ಮನಿದ್ದ ಹೆಂಡತಿ, ಅತ್ತೆ ಕೊಲೆ ನಂತರ ಮನೆ ಕ್ಲೀನ್ ಮಾಡಿ ಎಸ್ಕೇಪ್ ಆದವರು ಪೊಲೀಸರ ಬಲೆಗೆ