ಬೆಂಗಳೂರು: ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಹೊಡೆತದಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರಿಗೆ ನಿಗಮಗಳು ಶೀಘ್ರದಲ್ಲೇ ವಿಲೀನವಾಗುತ್ತಾ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಬಿಎಂಟಿಸಿ, ಕೆಎಸ್ಆರ್ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ಸೇರಿ ಇನ್ಮುಂದೆ ಒಂದೇ ನಿಗಮವಾಗಿ ಮಾಡಿ ಎಂಬ ಸಲಹೆಗಳನ್ನು ನೀಡಲಾಗುತ್ತಿದೆ. 4 ನಿಗಮಗಳನ್ನು ವಿಲೀನ ಮಾಡಿ ಒಂದೇ ನಿಗಮ ರಚಿಸುವಂತೆ ಟ್ರಾನ್ಸ್ಪೋರ್ಟ್ ಫೆಡರೇಶನ್ಗಳು ಸಲಹೆ ನೀಡಿವೆ.
ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ಸಾರಿಗೆ ನಿಗಮಗಳ ಪುನರ್ರಚನಾ ಸಮಿತಿಗೆ ಸಾರಿಗೆ ನೌಕರರ ಸಂಘದಿಂದ ಶಿಫಾರಸು ಮಾಡಲಾಗಿದೆ. ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ಬಸ್ಗಳ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೇ ನಿಗಮಗಳು ಪರದಾಟ ಅನುಭವಿಸುತ್ತಿವೆ. 1997 ರಿಂದ ಈವರೆಗೂ ನಾಲ್ಕೂ ನಿಗಮಗಳು ಬರೋಬ್ಬರಿ 4,500 ಕೋಟಿ ರೂ. ನಷ್ಟ ಅನುಭವಿಸಿವೆ. ಪಿಎಫ್, ಎಲ್ಐಸಿ, ನಿವೃತ್ತಿ ವೇತನ ಸೇರಿ 1,700 ಕೋಟಿ ರೂ. ಬಾಕಿ ಇದೆ. ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲೀನಗೊಳಿಸಿ ಆಡಳಿತ ವಿಭಾಗ ಸೇರಿದಂತೆ ಹಲವು ನಷ್ಟ ತಪ್ಪಿಸುವಂತೆ ಕಮಿಟಿಗೆ ಸಲಹೆ ನೀಡಲಾಗಿದೆ. ಈ ಕುರಿತು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ನ ಅಧ್ಯಕ್ಷ ಅನಂತ್ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.