ಬೆಂಗಳೂರು:ಆಗಸ್ಟ್ 16 ರಂದು ದೆಹಲಿಗೆ ತೆರಳುತ್ತಿದ್ದು, ರಾಜ್ಯದ ನೆರೆ ಹಾವಳಿ ಪರಿಹಾರ ಕಾರ್ಯಾಚರಣೆಗೆ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಂಗಳೂರಿಗೆ ತೆರಳುವ ಮುನ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನೆರೆಪೀಡಿತ ಪ್ರದೇಶಗಳಾದ ಮಂಗಳೂರು, ಮೈಸೂರು, ನಂಜನಗೂಡಿನಲ್ಲಿ ಪ್ರವಾಸ ಮಾಡುತ್ತಿದ್ದೇನೆ. ನಾಳೆ ಶಿವಮೊಗ್ಗ ಸೆರಿದಂತೆ ಮತ್ತಿತರ ಕಡೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೆರೆ ಹಾವಳಿ ಪ್ರದೇಶದಲ್ಲಿನ ಪರಿಹಾರ ಕಾರ್ಯದಲ್ಲಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಪೂರ್ಣ ಸಹಕಾರ ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ. ಬಹಳಷ್ಟು ಪರಿಹಾರ ಸಾಮಗ್ರಿ ಕೊಡುವ ದಾನಿಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸುತ್ತಿದ್ದೇನೆ. ದಾನಿಗಳು ನೀಡಿದ್ದನ್ನು ಒಂದು ಕಡೆ ಸಂಗ್ರಹಿಸಿ, ಸಂತ್ರಸ್ತರು ಮನೆಗೆ ಹೋಗುವಾಗ ಅವರಿಗೆ ಕೊಡಲು ಡಿಸಿಗಳಿಗೆ ಸೂಚಿಸಿದ್ದೇನೆ ಎಂದು ಬಿಎಸ್ವೈ ತಿಳಿಸಿದರು.
ಎಲ್ಲಾ ಜಿಲ್ಲೆಗಳಲ್ಲಿ ಸೇರಿ 40-50 ಸಾವಿರ ಕೋಟಿ ನಷ್ಟ ಆಗಿದೆ. ತಕ್ಷಣಕ್ಕೆ 3 ಸಾವಿರ ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇವೆ.
ಸ್ವತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಹೋಗಿರುವ ಕಾರಣ ಹೆಚ್ಚಿನ ನೆರವು ಪಡೆಯಲು ಸಹಕಾರಿಯಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.