ಬೆಂಗಳೂರು: ಕೋವಿಡ್ ಹೊಸ ತಳಿ 'ಒಮಿಕ್ರೋನ್' ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿರುವ ಬೆಳಗಾವಿ ಅಧಿವೇಶನದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.
ಮೂರು ವರ್ಷದ ನಂತರ ಈ ಬಾರಿ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಡಿ.13 ರಿಂದ ಡಿ.24ರ ವರೆಗೆ ಬೆಳಗಾವಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಿಧಾನಸಭೆ ಸಚಿವಾಲಯ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ, ಈ ಮಧ್ಯೆ ಕೋವಿಡ್ ಹೊಸ ತಳಿ ಬೆಳಗಾವಿ ಅಧಿವೇಶನದ ಮೇಲೆ ಮತ್ತೆ ಕರಿನೆರಳು ಮೂಡುವಂತೆ ಮಾಡಿದೆ.
ಭೀಕರ ನೆರೆ, ಕೋವಿಡ್ ಹಿನ್ನೆಲೆ ಕಳೆದ ಮೂರು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಆ ಭಾಗದ ಜನರ, ಜನಪ್ರತಿನಿಧಿಗಳ, ರೈತರ ಒತ್ತಡದಿಂದಾಗಿ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಲು ನಿರ್ಧರಿಸಿದೆ. ಈಗ ಕೊರೊನಾ ಹೊಸ ತಳಿಯ ಭೀತಿ ಉಲ್ಬಣಿಸಿರುವ ಹಿನ್ನೆಲೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತೋ, ಇಲ್ಲವೋ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲು
ಬೆಳಗಾವಿ ಅಧಿವೇಶನಕ್ಕೆ ಅಧಿಕಾರಿಗಳಲ್ಲಿ ಆತಂಕ:
ಒಮಿಕ್ರೋನ್ ರೂಪಾಂತರಿ ಕೋವಿಡ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ವಿಧಾನಸಭೆ ಸಚಿವಾಲಯದ ಅಧಿಕಾರಿಗಳಲ್ಲಿ ಬೆಳಗಾವಿ ಅಧಿವೇಶನ ನಡೆಸುವ ಕುರಿತು ಆತಂಕ ಹುಟ್ಟು ಹಾಕಿದೆ. ಕೋವಿಡ್ ಹೊಸ ತಳಿ ಹಿನ್ನೆಲೆ ಮತ್ತೆ ಜನ ಸೇರುವಿಕೆ, ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಲು ಈಗಾಗಲೇ ತಜ್ಞರ ಸಮಿತಿ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಮಧ್ಯೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಅಪಾಯಕಾರಿ ಎಂಬುದು ಕೆಲ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಅಧಿವೇಶನ ಹಿನ್ನೆಲೆ ಬೆಳಗಾವಿಗೆ ಬೆಂಗಳೂರಿನಿಂದ ಇಡೀ ಆಡಳಿತ ಯಂತ್ರವನ್ನು ಸ್ಥಳಾಂತರಿಸಬೇಕಾಗಿದೆ. ಅಧಿಕಾರಿಗಳು, ಶಾಸಕರು, ಸಚಿವರು, ಮಾಧ್ಯಮದವರು ಬೆಳಗಾವಿಗೆ ಹೋಗಬೇಕಾಗಿದೆ. ಬೃಹತ್ ಪ್ರಮಾಣದಲ್ಲಿ ಬೆಳಗಾವಿಯಲ್ಲಿ ಜನ ಸೇರುವ ಪರಿಸ್ಥಿತಿ ಎದುರಾಗಲಿದೆ. ಇದರಿಂದ ಕೋವಿಡ್ ಉಲ್ಬಣಿಸುವ ಸಾಧ್ಯತೆ ಇದೆ ಎಂಬುದು ಹಲವರ ಆತಂಕ.
ಇದನ್ನೂ ಓದಿ:ಸಾರಿಗೆ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ : ನಾಲ್ವರು ಸ್ಥಳದಲ್ಲೇ ದುರ್ಮರಣ
ಬೆಂಗಳೂರಿನಲ್ಲೇ ಅಧಿವೇಶನ ನಡೆದರೆ ಕೋವಿಡ್ ಅಪಾಯ ಕಡಿಮೆ. ಈಗಾಗಲೇ ವಿಧಾನಸೌಧದಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಧಿವೇಶನ ನಡೆಸಲಾಗಿತ್ತು. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ವಿಧಾನಸೌಧದಲ್ಲಿ ಮಾಡಲಾಗಿದೆ. ಇತ್ತ ಬೆಳಗಾವಿ ಸುವರ್ಣಸೌಧದಲ್ಲಿ ಇಂಥ ಮುಂಜಾಗ್ರತಾ ವ್ಯವಸ್ಥೆಗಳಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಸಮಂಜಸವಲ್ಲ ಎಂಬುದು ಕೆಲ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮರುಪರಿಶೀಲನೆ ಸಾಧ್ಯತೆ?:
ಇದೇ ವೇಳೆ, ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಸರ್ಕಾರ ಮರು ಪರಿಶೀಲನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಒಂದು ವಾರದಲ್ಲಿ ಕೋವಿಡ್ ಪ್ರಮಾಣದ ಸ್ಥಿತಿಗತಿ ಗೊತ್ತಾಗಲಿದೆ. ಒಂದು ವೇಳೆ ಏರು ಗತಿಯಲ್ಲಿ ಇದ್ದರೆ, ಬೆಳಗಾವಿ ಅಧಿವೇಶನದ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡಿ.2 ನೇ ತಾರೀಕು ಸ್ಪೀಕರ್ ಕಾಗೇರಿ ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಲು ಯೋಚಿಸಿದ್ದು, ಅಲ್ಲಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಾದರೆ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಅನುಮಾನ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಸಿಎಂ ಬೊಮ್ಮಾಯಿ ಪರಿಸ್ಥಿತಿ ನೋಡಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.