ಕರ್ನಾಟಕ

karnataka

By

Published : Mar 21, 2022, 4:48 PM IST

Updated : Mar 21, 2022, 5:11 PM IST

ETV Bharat / city

'ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳ ಕಲಿಕೆಗೆ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಅವಕಾಶ'

ಉಕ್ರೇನ್​​ನಿಂದ ಬಂದ ವಿದ್ಯಾರ್ಥಿಗಳ ಬಗ್ಗೆ ಕೇಂದ್ರಕ್ಕೆ ಹಾಗೂ ಎನ್​​ಎಂಸಿಗೆ ನಾವು ಏನು ಮನವಿ ಮಾಡಬೇಕು ಎಂಬುದರ ಬಗ್ಗೆ ಸಮಿತಿ ವರದಿ ನೀಡಲಿದೆ.‌ ಕೋವಿಡ್​​ನಿಂದ ಬೇರೆ ಬೇರೆ ದೇಶಗಳಿಂದ ಕೆಲ ಮೆಡಿಕಲ್ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಅವರ ಬಗ್ಗೆಯೂ ಸಮಿತಿಗೆ ವರದಿ ನೀಡಲು ಸೂಚಿಸಿದ್ದೇನೆ..

Minister Dr K Sudhakar
ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು :ಯುದ್ಧಪೀಡಿತ ಉಕ್ರೇನ್​​ನಿಂದ ರಾಜ್ಯಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಯುವ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವ ಡಾ. ಕೆ ಸುಧಾಕರ್​​ ಸುದ್ದಿಗೋಷ್ಠಿ

ವಿಧಾನಸೌಧದಲ್ಲಿ ಉಕ್ರೇನ್​ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳ ಜತೆ ಆರೋಗ್ಯ ಸಚಿವರು ಮಾತುಕತೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದರು.

ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆದಿದೆ. ಸಿಎಂ ಸೂಚನೆ ಮೇರೆಗೆ ಸಭೆ ನಡೆಸಲಾಯಿತು. ವಿದ್ಯಾರ್ಥಿಗಳ ಕಲಿಕೆ ಮುಂದುವರಿಕೆಗೆ ನಮ್ಮ ಸರ್ಕಾರದ ಮೊದಲ ಆದ್ಯತೆ.

ಉಕ್ರೇನ್​​ನಿಂದ ಮರಳಿದ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳಬಾರದು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳ ಕಲಿಕೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಉಕ್ರೇನ್‌ನಿಂದ ಬಂದವರಲ್ಲಿ ಪ್ರಥಮ ವರ್ಷದಿಂದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿ ಸುಮಾರು 60 ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ಕಲಿಕೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಕ್ಲಿನಿಕಲ್ ತರಬೇತಿ ಕೂಡ ಮುಂದುವರಿಯಬೇಕು. ಈ ನಿಟ್ಟಿನಲ್ಲಿ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ಅಧಿಕೃತ ನೋಂದಣಿಯಿಲ್ಲ: ಆದರೆ, ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಲಾಗುವುದಿಲ್ಲ. ಕಲಿಕೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಸರ್ಕಾರವೇ ಅವರಿಗೆ ಕಾಲೇಜು ಯಾವುದು ಎಂಬುವುದನ್ನು ಆಯ್ಕೆ ಮಾಡುತ್ತದೆ. ಅವರು ಇರುವ ವಿಳಾಸದ ಆಧಾರದಲ್ಲಿ ಸನಿಹದ ವೈದ್ಯಕೀಯ ಕಾಲೇಜುಗಳನ್ನು ಆಯ್ಕೆ ಮಾಡಿ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ : ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಐದು ಸದಸ್ಯರ ಸಮಿತಿ ರಚನೆಯಾಗಲಿದೆ.

ಇದನ್ನೂ ಓದಿ:'ವೈದ್ಯಕೀಯ ಶಿಕ್ಷಣ ಮುಂದುವರೆಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು'

ಉಕ್ರೇನ್​​ನಿಂದ ಬಂದ ವಿದ್ಯಾರ್ಥಿಗಳ ಬಗ್ಗೆ ಕೇಂದ್ರಕ್ಕೆ ಹಾಗೂ ಎನ್​​ಎಂಸಿಗೆ ನಾವು ಏನು ಮನವಿ ಮಾಡಬೇಕು ಎಂಬುದರ ಬಗ್ಗೆ ಸಮಿತಿ ವರದಿ ನೀಡಲಿದೆ.‌ ಕೋವಿಡ್​​ನಿಂದ ಬೇರೆ ಬೇರೆ ದೇಶಗಳಿಂದ ಕೆಲ ಮೆಡಿಕಲ್ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಅವರ ಬಗ್ಗೆಯೂ ಸಮಿತಿಗೆ ವರದಿ ನೀಡಲು ಸೂಚಿಸಿದ್ದೇನೆ.

ಇದರ ಜತೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಅವರಿಗೆ ಯಾವ ರೀತಿ ನ್ಯಾಯ ಕೊಡಿಸಬೇಕು ಎಂಬುವುದರ ಬಗ್ಗೆ ಚರ್ಚೆ ಮಾಡುತ್ತೇವೆ‌. ಇರುವ ಕಾನೂನಿನ ಅಡಿ ಇವರ ಶೈಕ್ಷಣಿಕ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಸಮಿತಿಯಲ್ಲಿ ವೈದ್ಯಕೀಯ ಕಾಲೇಜುಗಳ ನಾಲ್ಕು ಮಂದಿ ಡೀನ್​​ಗಳು ಸಹ ಇರಲಿದ್ದಾರೆ. ಸಮಿತಿಗೆ ವರದಿಯನ್ನು ಒಂದು ವಾರ ಅಥವಾ ಹತ್ತು ದಿನದೊಳಗೆ ನೀಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು.

ಇದನ್ನೂ ಓದಿ:ನುಡಿದಂತೆ ಆಸ್ಪತ್ರೆಗೆ ನವೀನ್ ಮೃತದೇಹ ಹಸ್ತಾಂತರಿಸಿದ್ದೇನೆ: ತಂದೆಯಿಂದ ಕಣ್ಣೀರಿನ ವಿದಾಯ

Last Updated : Mar 21, 2022, 5:11 PM IST

ABOUT THE AUTHOR

...view details