ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಮೀವುದ್ದೀನ್ಗೆ ಖಾಕಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಪತಿ ಬಂಧನದ ಬಳಿಕ ಪತ್ನಿಗೆ ನಾರಿ ಫೌಂಡೇಶನ್ ಕುರಿತು ಮಾಹಿತಿ ನೀಡಲು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದರೂ ಸಹ ಗೈರಾಗಿದ್ದಾರೆ.
ಪತ್ನಿ ಫಾತಿಮಾ ತಬಸೂಮ್ ಅವರು ಪತಿ ಬಂಧನದ ದಿನದಿಂದ ಮನೆ ಖಾಲಿ ಮಾಡಿ ಹೋಗಿದ್ದರು. ನಗರ ಪೊಲೀಸ್ ಆಯುಕ್ತರ ಕಚೇರಿಗೂ ಒಮ್ಮೆ ಅವರು ಭೇಟಿ ನೀಡಿ ಹೋಗಿದ್ದಾರೆ. ನಂತರ ನಿನ್ನೆ (ಗುರುವಾರ) ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು. ಈ ವೇಳೆ ತನ್ನ ಗಂಡ ಕಾಣೆಯಾಗಿದ್ದಾನೆ. ಘಟನೆಗೂ ನಮಗೂ ಸಂಬಂಧವಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು.
ನಾರಿ ಫೌಂಡೇಶನ್ ಬಗ್ಗೆ ಈಗಾಗಲೇ ಸಾಕಷ್ಟು ಅನುಮಾನಗಳಿವೆ. ಈ ವಿಚಾರಗಳಿಗೆ ಉತ್ತರ ನೀಡಬೇಕಾದ ಭಯದಲ್ಲಿ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎಂದು ತನಿಖಾಧಿಕಾರಿಗಳಿಗೆ ಗೊತ್ತಾಗಿದೆ ಎನ್ನಲಾಗ್ತಿದೆ.
ಸಿಸಿಬಿ ಪೊಲೀಸರ ನೋಟಿಸ್ ಪಡೆಯದೇ ಕದ್ದುಮುಚ್ಚಿ ಫಾತಿಮಾ ಓಡಾಡುತ್ತಿದ್ದಾರೆ. ಸಂಬಂಧಿಕರ ಮನೆಯಲ್ಲೂ ಅವರು ತಂಗುತ್ತಿಲ್ಲ. ಒಂದು ವೇಳೆ ನೋಟಿಸ್ ಪಡೆದರೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ತನಿಖೆಯಲ್ಲಿ ಸಮೀವುದ್ದೀನ್ ಪತ್ನಿ ನಡೆಸುತ್ತಿರುವ ಫೌಂಡೇಶನ್ಗೆ ವಿದೇಶದಿಂದ ಕೋಟಿ, ಕೋಟಿ ಫಂಡ್ ಬಂದಿದೆ ಎಂಬುದು ಬಯಲಾಗಿದೆ. ಹಾಗೆಯೇ ಸಂಸ್ಥೆಯಿಂದ ಹಲವರಿಗೆ ಸಹಾಯ ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು? ಸಂಸ್ಥೆಗೆ ಉಗ್ರರ ನಂಟು ಇದೆಯೇ ಎಂದು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.