ಕರ್ನಾಟಕ

karnataka

ETV Bharat / city

ಪತಿ ವಿರುದ್ಧ ಪತ್ನಿಯಿಂದ ಅತ್ಯಾಚಾರ ಆರೋಪ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಪತ್ನಿಯ ಮೇಲೆ ಪತಿ ಅತ್ಯಾಚಾರ, ಹಲ್ಲೆ ಮತ್ತು ಕೌಟುಂಬಿಕ ದೌರ್ಜನ್ಯ ಎಸಗಿರುವುದನ್ನು ಸಾಬೀತುಪಡಿಸುವ ಅಂಶಗಳಿಲ್ಲ ಎಂದು ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪತಿ ವಿರುದ್ಧ ಪತ್ನಿಯಿಂದ ಅತ್ಯಾಚಾರ ಆರೋಪ
ಪತಿ ವಿರುದ್ಧ ಪತ್ನಿಯಿಂದ ಅತ್ಯಾಚಾರ ಆರೋಪ

By

Published : Dec 17, 2021, 9:18 PM IST

ಬೆಂಗಳೂರು: ಪತಿಯ ವಿರುದ್ಧವೇ ಪತ್ನಿ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಪತ್ನಿ ದೂರಿನ ಮೇರೆಗೆ ದಾಖಲಿಸಿರುವ ಎಫ್ಐಆರ್ ಹಾಗೂ ದೋಷಾರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಗಿರಿನಗರದ ಮಂಜುನಾಥ್ ಹೆಬ್ಬಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಮಹಿಳೆಯ ದೂರು, ತನಿಖೆ ಹಾಗೂ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಿಸಿರುವ ಹೇಳಿಕೆಗಳನ್ನು ಗಮನಿಸಿದರೆ ಅರ್ಜಿದಾರರು ಪತ್ನಿಯ ಮೇಲೆ ಅತ್ಯಾಚಾರ, ಹಲ್ಲೆ ಮತ್ತು ಕೌಟುಂಬಿಕ ದೌರ್ಜನ್ಯ ಎಸಗಿರುವುದನ್ನು ಸಾಬೀತುಪಡಿಸುವ ಅಂಶಗಳಿಲ್ಲ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆಯೂ ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ:
ಮಂಜುನಾಥ್ ಹೆಬ್ಬಾರ್ ಹಾಗೂ ದೂರುದಾರ ಮಹಿಳೆ 2009ರ ಮೇ 27ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿವಾಹವಾಗಿದ್ದರು. 2012ರಲ್ಲಿ ತವರಿಗೆ ವಾಪಸ್​ ಆಗಿದ್ದ ಮಹಿಳೆ ನಂತರ ಗಂಡನ ಜೊತೆ ಇರದೇ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು.

2015ರ ಆ.29ರಂದು ಪತಿಯ ವಿರುದ್ಧ ಅತ್ಯಾಚಾರ ಆರೋಪದಡಿ ಗಿರಿನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಮಂಜುನಾಥ್ ಹೆಬ್ಬಾರ್ ವಿರುದ್ಧ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಹಲ್ಲೆ ಆರೋಪಗಳಡಿ 2018ರಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ 2019ರಲ್ಲಿ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಬಳಿಕ ಪ್ರಕರಣ ರದ್ದು ಕೋರಿ ಮಂಜುನಾಥ ಹೆಬ್ಬಾರ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

(ಇದನ್ನೂ ಓದಿ: ಪ್ರಧಾನಿ ಮೋದಿಗೆ ಭೂತಾನ್​ನ 'ಅತ್ಯುನ್ನತ ನಾಗರಿಕ ಪ್ರಶಸ್ತಿ' ಗೌರವ)

ABOUT THE AUTHOR

...view details