ಬೆಂಗಳೂರು :ಗುಜರಾತ್ ಸರ್ಕಾರವು ಭಗವದ್ಗೀತೆಯ ಶೋಕ್ಲಗಳನ್ನು ಪಠ್ಯದಲ್ಲಿ ಅಳವಡಿಸಲು ಮುಂದಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತು ಬೇಡಿಕೆಗಳು ಹೆಚ್ಚಾಗುತ್ತಿವೆ. ಆದರೆ, ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ.
ಭಗವದ್ಗೀತೆ ಪಠ್ಯದಲ್ಲಿ ಸೇರಿಸುವ ಕುರಿತಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯದರ್ಶಿ ಸರ್ಫರಾಜ್ ಗಂಗಾವತಿ ಪ್ರತಿಕ್ರಿಯೆ ನೀಡಿರುವುದು.. ಈ ಸಂಬಂಧ ನಿನ್ನೆ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದಾಗ ಕರ್ನಾಟಕದಲ್ಲಿ ಈ ವರ್ಷದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಯಾವುದೇ ಪ್ರಯತ್ನ ಇಲ್ಲ ಎಂದಿದ್ದಾರೆ. ಆದರೆ, ಹೆಚ್ಚಿನ ಬೇಡಿಕೆ ಬರುತ್ತಿದೆ. ಶಿಕ್ಷಣದಲ್ಲಿ ಸಾಕಷ್ಟು ಜ್ಞಾನ ನೀಡಲಾಗ್ತಿದೆ.
ಆದರೆ, ಸಂಸ್ಕಾರ ಕೊಡ್ತಿಲ್ಲ ಎಂಬ ಮಾತು ಕೇಳಿ ಬರ್ತಿವೆ. ಹಿಂದೆ ವಾರಕ್ಕೊಂದು ದಿನ ಮಾರಲ್ ಸೈನ್ಸ್ ತರಗತಿ ಇತ್ತು. ಅದನ್ನು ಈಗ ತೆಗೆದು ಹಾಕಲಾಗಿದೆ. ಮುಂದಿನ ದಿನ ಅದನ್ನೂ ಆರಂಭಿಸುವಂತೆ ಬೇಡಿಕೆ ಇದ್ದು, ಸಿಎಂ ಹಾಗೂ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಅಂದಿದ್ದಾರೆ.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯದರ್ಶಿ ಸರ್ಫರಾಜ್ ಗಂಗಾವತಿ ಮಾತನಾಡಿದ್ದು, ನಮ್ಮದು ಬಹುಸಂಸ್ಕೃತಿಯ ದೇಶ, ಅದನ್ನು ಕೆಡವಿ ಹಾಕುವ ರೀತಿಯಲ್ಲಿ ಭಗವದ್ಗೀತೆ ಜಾರಿ ಮಾಡಲು ಹೊರಟಿದ್ದಾರೆ.
ಸಂವಿಧಾನದ ಆರ್ಟಿಕಲ್ 28(1)ರಲ್ಲಿ ಹೇಳಿರುವಂತೆ ಸರ್ಕಾರದ ಅಧೀನದಲ್ಲಿ ಬರುವ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಒಂದು ಧರ್ಮದ ವಿಚಾರವನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಲು ಹೊರಟಿದೆ ಎಂದರು.
ಬಿಜೆಪಿ ಹಿಂದುತ್ವ ಸಿದ್ಧಾಂತವನ್ನು ಹರಡಲು ಈ ಮೂಲಕ ಮುಂದಾಗಿದೆ. ಗುಜರಾತ್ ಮಾದರಿಯಲ್ಲಿ ಇಲ್ಲಿ ತಮ್ಮ ಅಜೆಂಡಾ ಹರಡಲು ಬಿಜೆಪಿ ಮುಂದಾದರೆ ಪರಿಣಾಮ ಊಹಿಸಲೂ ಸಾಧ್ಯವಿಲ್ಲ. ಇದು ಬಸವಣ್ಣ, ಕುವೆಂಪು ಅವರು ನಡೆದಾಡಿದ ಮಣ್ಣು, ನಾವು ಭಗವದ್ಗೀತೆಯನ್ನು ವಿರೋಧಿಸುತ್ತಿಲ್ಲ. ಆದರೆ, ಹಿಂದುತ್ವದ ಅಜೆಂಡಾ ಹೇರುವಿಕೆ ಮುಂದಾದರೆ ವಿರೋಧಿಸುತ್ತೇವೆ.
ಯಾವುದೇ ಕಾರಣಕ್ಕೂ ಧರ್ಮವನ್ನು ಮಕ್ಕಳ ಮೇಲೆ ಹೇರುವ ಷಡ್ಯಂತ್ರಕ್ಕೆ ಬೆಂಬಲಿಸಬಾರದು. ಭಗವದ್ಗೀತೆ ಪಠ್ಯ ಮಾಡಿದ ತಕ್ಷಣ ವೋಟ್ ಬ್ಯಾಂಕ್ ವಿಸ್ತರಿಸುವ ಭ್ರಮೆಯಲ್ಲಿ ಬಿಜೆಪಿ ಇದೆ. ನೈತಿಕ ಶಿಕ್ಷಣಕ್ಕೆ ಭಗವದ್ಗೀತೆಯೇ ಏಕೆ ಬೇಕು? ಬಹಳಷ್ಟು ವಿಚಾರಗಳು ಬೇರೆ ಇದೆಯಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.