ಬೆಂಗಳೂರು: ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿಲ್ಲವೇಕೆ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ವಕೀಲರು ಮಾಹಿತಿ ನೀಡಿ, ಮೀಸಲಾತಿ ಹೋರಾಟದ ವೇಳೆ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಪ್ರಮಾಣ ಪತ್ರ ಪರಿಶೀಲಿಸಿದ ಪೀಠ, ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ಏಕೆ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿತು. ಅಲ್ಲದೆ, ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿದೆ. ಆದರೆ, ಸರ್ಕಾರ ಕೇವಲ ದಂಡ ವಿಧಿಸುತ್ತಿದೆ ಹೊರತು ಎಫ್‌ಐಆರ್ ದಾಖಲಿಸುತ್ತಿಲ್ಲ. ಹೀಗಾದರೆ ಕೊರೊನಾ ನಿಯಂತ್ರಿಸುವುದು ಹೇಗೆ ? ಕಾಯ್ದೆಯಲ್ಲಿ ಕೇವಲ ದಂಡ ಕಟ್ಟಿಸಿಕೊಂಡು ಬಿಡಲು ಅವಕಾಶವಿದೆಯೇ? ಎಂದು ಪ್ರಶ್ನಿಸಿತು.
ಅಲ್ಲದೇ, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಮಾರ್ಗಸೂಚಿಗಳನ್ನು ಪಾಲಿಸದಿದ್ದರೂ ರ್ಯಾಲಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಸೋಂಕು ಕಡಿಮೆಯಾಗುವುದಿಲ್ಲ. ಹೀಗಾಗಿ, ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ಏಕೆ ದಾಖಲಿಸುತ್ತಿಲ್ಲ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ಇದೇ ವೇಳೆ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಜೆಡಿಎಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.