ಬೆಂಗಳೂರು: ನಗರದ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಟೌನ್‌ಹಾಲ್ ಮಾರ್ಗದ ಎಸ್.ಜೆ.ಪಿ ರಸ್ತೆಯ ಜಂಕ್ಷನ್‌ನಲ್ಲಿ ಇಂದಿನಿಂದ ವೈಟ್ ಟ್ಯಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದ್ದಾರೆ.
ಎಸ್.ಜೆ.ಪಿ ರಸ್ತೆಯ ಜಂಕ್ಷನ್‌ನಲ್ಲಿ ಇಂದಿನಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭ ಪಾಲಿಕೆಯ ವತಿಯಿಂದ ನಗರದ ಎನ್.ಆರ್ ರಸ್ತೆಯನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯ ಎಸ್.ಜೆ.ಪಿ ರಸ್ತೆಯ ಜಂಕ್ಷನ್ ನಲ್ಲಿ ವೈಟ್ ಟಾಪಿಂಗ್ ಮತ್ತು ಅಡ್ಡಮೋರಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಅನುಮತಿ ಪಡೆಯಲಾಗಿದೆ. ಕಾಮಗಾರಿ ನಡೆಯುವ ವೇಳೆ ಸಂಚಾರ ದಟ್ಟಣೆ ತಡೆಯಲು ಉದ್ದೇಶಿಸಲಾಗಿದ್ದು, ಕೆ.ಆರ್ ಮಾರುಕಟ್ಟೆ ಮೇಲ್ಸೇತುವೆ ರಸ್ತೆಯ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
ನಗರದ ಗೂಡ್ ಶೆಡ್ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಿರ್ವಹಿಸುವ ಸಂಬಂಧ ಗೂಡ್ ಶೆಡ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ, ಎಲ್ಲ ವಾಹನಗಳನ್ನು ಮೇಲ್ಸೇತುವೆಯ ಮೂಲಕ ಮಾರುಕಟ್ಟೆ ಮತ್ತು ಟೌನ್‌ಹಾಲ್ ಕಡೆಗೆ ಸಂಚಾರ ಬದಲಾವಣೆ ಮಾಡಲಾಗಿತ್ತು. ಆದರೆ, ಎಸ್.ಜೆ.ಪಿ ರಸ್ತೆಯ ಜಂಕ್ಷನ್ ಹತ್ತಿರ ಮಳೆಯಾದರೆ ನೀರು ನಿಲ್ಲುವ ಸಾಧ್ಯೆಯಿದ್ದು, ಶೀಘ್ರವಾಗಿ ಇಲ್ಲಿ ವೈಟ್ ಟ್ಯಾಪಿಂಗ್ ಮತ್ತು ಅಡ್ಡಮೋರಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
15 ದಿನದೊಳಗೆ ಕಾಮಗಾರಿ ಪೂರ್ಣ:
ಎಸ್.ಜೆ.ಪಿ ರಸ್ತೆಯ ಜಂಕ್ಷನ್‌ನಲ್ಲಿ ಕೈಗೆತ್ತಿಕೊಳ್ಳುವ ವೈಟ್ ಟ್ಯಾಪಿಂಗ್ ಮತ್ತು ಅಡ್ಡಮೋರಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದು ಪೂರ್ಣಗೊಂಡ ಬಳಿಕ ಗೂಡ್ ಶೆಡ್ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಕಾಮಗಾರಿ ಸಮಯದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ನನಗೆ ಅತೃಪ್ತಿ ಇಲ್ಲ, ನಾನು ತೃಪ್ತ: ರೇಣುಕಾಚಾರ್ಯ