ಬೆಂಗಳೂರು:ನಾಳೆ ಸದನದಲ್ಲಿ ವಿಶ್ವಾಸಮತದ ಪರ ಮತ ಚಲಾಯಿಸುವಂತೆ ಬಿಜೆಪಿ ಶಾಸಕರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ವಿಪ್ ಜಾರಿ ಮಾಡಲಾಯಿತು.
ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಳ್ಳುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪರ ಸೂಚನೆ ಮೇರೆಗೆ ಪಕ್ಷದ ಎಲ್ಲಾ ಶಾಸಕರಿಗೂ ಬಿಜೆಪಿ ಸಚೇತಕ ಸುನೀಲ್ ಕುಮಾರ್ ವಿಪ್ ಜಾರಿಗೊಳಿಸಿದರು.
ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಮಂಡಿಸಲಿದ್ದು, ಅದರ ಮೇಲಿನ ಚರ್ಚೆ ಪೂರ್ಣಗೊಳ್ಳುವವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ವಿಸ್ವಾಸಮತದ ಪರ ಮತ ಚಲಾಯಿಸಬೇಕು ಎಂದು ವಿಪ್ ನೀಡಲಾಯಿತು.
ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಾಸಕರ ಅಭಿಪ್ರಾಯ ಕೇಳಿದರು. ಈ ವೇಳೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಸ್ಯೆ ಆಗಿತ್ತು. ಅದನ್ನು ನೀವು ಸರಿ ಮಾಡಿಕೊಡಬೇಕು ಎಂದು ಸಭೆಯಲ್ಲಿ ಶಾಸಕರು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶಕ್ಕೋಸ್ಕರ ಕೆಲಸ ಮಾಡುತ್ತಿರುವಾಗ ನಾವು ರಾಜ್ಯಕ್ಕೆ ಕೆಲಸ ಮಾಡಬೇಕು. ನೀವುಗಳೆಲ್ಲರೂ ಜನರ ಮಧ್ಯೆಯೇ ಇರಬೇಕು. ಎರಡು ದಿನ ಅಧಿವೇಶನ ಇದೆ. ನಂತರ ಎಲ್ಲಾ ಶಾಸಕರೂ ಸದಸ್ಯತ್ವ ಅಭಿಯಾನಕ್ಕೆ ಇಳಿಯಬೇಕು. ಕೇಂದ್ರದ ನಾಯಕರು ಕೊಟ್ಟಿರುವ ಟಾಸ್ಕ್ಅನ್ನು ಕಡ್ಡಾಯವಾಗಿ ಪೂರೈಸಲೇಬೇಕು. ಹಾಗೆಯೇ ಅನರ್ಹಗೊಂಡ ಶಾಸಕರು ಕಾನೂನು ಹೋರಾಟ ಮುಂದುವರಿಸುತ್ತಾರೆ. ನಾವು ಅವರ ಬೆಂಬಲಕ್ಕೆ ನಿಲ್ಲೋಣ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಾಳೆ ವಿಶ್ವಾಸಮತ ಸಾಬೀತು ವೇಳೆ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು 12 ಶಾಸಕರಿಗೆ ಜವಾಬ್ದಾರಿ ನೀಡಿದ ಬಿಎಸ್ವೈ, ವಿಧಾನಸಭೆ ಸ್ಪೀಕರ್ ರಾಜೀನಾಮೆ ನೀಡಬಹುದು. ಅಂತಹ ಸ್ಥಿತಿ ಎದುರಾದರೆ ಪರ್ಯಾಯಕ್ಕೆ ಬಿಜೆಪಿ ಸಿದ್ಧವಾಗಬೇಕು. ಜೆಡಿಎಸ್ನವರೇ ಮಂಡಿಸಿರುವ ಬಜೆಟ್ ಆಗಿರುವ ಕಾರಣ ಧನ ವಿನಿಯೋಗ ವಿಧೇಯಕಕ್ಕೆ ವಿರೋಧ ಮಾಡಲಿಕ್ಕಿಲ್ಲ. ಎಲ್ಲರೂ ನಾಳೆ ಗಂಭೀರವಾಗಿರಿ. ಏನೂ ತೊಂದರೆ ಆಗಬಾರದು ಎಂದು ತಾಕೀತು ಮಾಡಿದ್ದಾರೆ.
ಒಂದೂವರೆ ತಿಂಗಳಿನಿಂದ ಅಧಿಕಾರಿಗಳೂ ಕೂಡಾ ಸ್ವಲ್ಪ ಗೊಂದಲದಲ್ಲಿದ್ದಾರೆ. ಇಷ್ಟು ದಿನ ಕ್ಷೇತ್ರದಿಂದ ದೂರ ಇದ್ದ ಕಾರಣ ಜನರೂ ಕೂಡಾ ಬೇಸರ ಆಗಿರುತ್ತಾರೆ. ಅಧಿವೇಶನ ಮುಗಿದ ಬಳಿಕ ಕ್ಷೇತ್ರಕ್ಕೆ ಹೋಗಿ ಸೀರಿಯಸ್ ಆಗಿ ಓಡಾಟ ಮಾಡಿ ಎಂದು ಇಂದಿನ ಸಭೆಯಲ್ಲಿ ಶಾಸಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.