ಬೆಂಗಳೂರು: ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಆರು ತಿಂಗಳು ಆಗಿದೆ. ಆದರೆ ಬಿಎಸ್ವೈ ಸರ್ಕಾರದ ಸಂಪುಟ ಸಚಿವರಲ್ಲಿ ಬಹುತೇಕರು ಶಕ್ತಿಸೌಧದಲ್ಲಿ ಕಾಣಿಸಿಕೊಳ್ಳುವುದೇ ಬಲು ಅಪರೂಪ.
ವಿಧಾನಸೌಧ ರಾಜ್ಯದ ಆಡಳಿತ ಶಕ್ತಿ ಕೇಂದ್ರ. ಎಲ್ಲ ಪ್ರಮುಖ ನಿರ್ಧಾರಗಳು, ಇಲಾಖೆಯ ಸಮಗ್ರ ಪರಿಶೀಲನೆ, ರೂಪಿಸಬೇಕಾದ ನೀತಿ ನಿಯಮಗಳು ಸೇರಿದಂತೆ ಮಹತ್ವದ ನಿರ್ಣಯಗಳನ್ನು ಶಕ್ತಿಸೌಧದಲ್ಲೇ ತೆಗೆದುಕೊಳ್ಳಬೇಕಾಗುತ್ತದೆ. ಆಡಳಿತ ಯಂತ್ರದ ಹಿರಿಯ ಅಧಿಕಾರಿಗಳ ವರ್ಗ ವಿಧಾನಸೌಧದಲ್ಲೇ ಕೇಂದ್ರೀಕೃತವಾಗಿದೆ. ಹೀಗಾಗಿ ಸಚಿವರುಗಳು ತಮ್ಮ ಇಲಾಖೆಗಳಿಗೆ ಸಂಬಂಧ ಪಟ್ಟ ಕಡತ ವಿಲೇವಾರಿ, ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಧಾನಸೌಧಕ್ಕೆ ಬರುವುದು ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ.
ಹೀಗಿದ್ದರೂ ಆಡಳಿತ ಯಂತ್ರದ ಕೇಂದ್ರ ಬಿಂದುವಾದ ವಿಧಾನಸೌಧಕ್ಕೆ ಬಿಎಸ್ವೈ ಸಂಪುಟದ ಹಲವು ಸಚಿವರುಗಳು ಚಕ್ಕರ್ ಹಾಕುತ್ತಿದ್ದಾರೆ. ಅಧಿಕಾರ ಹಿಡಿದು ಆರು ತಿಂಗಳು ಸಮೀಪಿಸುತ್ತಿದ್ದರೂ, ಅನೇಕ ಸಚಿವರದ್ದು ಶಕ್ತಿಕೇಂದ್ರಕ್ಕೆ ವಿರಳ ಹಾಜರಾತಿ ಇದೆ.
ಯಾವ ಸಚಿವರದ್ದು ವಿರಳ ಹಾಜರಾತಿ?
ವಿಧಾನಸೌಧ ಹಾಗು ವಿಕಾಸಸೌಧ, ಸರ್ಕಾರದ ಸಂಪುಟ ಸಚಿವರಿಗೆ ಪ್ರಮುಖ ಆಡಳಿತ ಯಂತ್ರದ ಕಾರ್ಯಸ್ಥಾನವಾಗಿದೆ. ಆದರೆ, ಹಲವು ಸಚಿವರು ಶಕ್ತಿಕೇಂದ್ರದಲ್ಲಿ ಕೇವಲ ಗೆಸ್ಟ್ ಅಪಿಯರೆನ್ಸ್ಗೆ ಸೀಮಿತರಾಗಿದ್ದಾರೆ. ವಿಧಾನಸೌಧದ ಅಪರೂಪದ ಅತಿಥಿ ಸಚಿವರಲ್ಲಿ ಮೊದಲಿಗರು ಆರೋಗ್ಯ ಸಚಿವ ಶ್ರೀರಾಮುಲು. ಶ್ರೀರಾಮುಲು ಅಧಿಕಾರ ವಹಿಸಿಕೊಂಡ ಬಳಿಕ ಬೆರಳೆಣಿಕೆಯಷ್ಟು ದಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿರುವುದು ಅತ್ಯಂತ ವಿರಳ.