ಬೆಂಗಳೂರು: ವೈನ್, ವಿಸ್ಕಿ ಸೇರಿದಂತೆ ದುಬಾರಿ ಮೌಲ್ಯದ ಮದ್ಯದ ಬೆಲೆ ಕಡಿಮೆ ಮಾಡಿ ಸುಮಾರು ಐದು ಕೋಟಿ ರೂ. ಗಳಷ್ಟು ಹೆಚ್ಚುವರಿ ಆದಾಯ ಗಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ದುಬಾರಿ ಬೆಲೆಯ ಮದ್ಯದ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದರೆ ಹೆಚ್ಚು ಮದ್ಯ ಮಾರಾಟವಾಗಲಿದೆ ಎಂಬ ಲೆಕ್ಕಾಚಾರ ಹಾಕಿರುವ ಸರ್ಕಾರ, ಈ ಚಿಂತನೆ ನಡೆಸಿದೆ.
ಈ ಸಂಬಂಧ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದು, ಇದರ ಬೆನ್ನಲ್ಲೇ ಇದಕ್ಕೆ ಪ್ರೇರಣೆ ನೀಡಿದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಆದರೆ ಹಿಂದಿನಂತೆ ಅಬಕಾರಿ ಇಲಾಖೆಯ ಡಿಸಿ ಹಂತದ ಅಧಿಕಾರಿಗಳ ಬದಲು ಖುದ್ದಾಗಿ ತಾವೂ ಒಂದು ರಾಜ್ಯಕ್ಕೆ ತಂಡದೊಂದಿಗೆ ಭೇಟಿ ನೀಡಲಿದ್ದಾರೆ.
ಉಳಿದಂತೆ ಅಬಕಾರಿ ಇಲಾಖೆಯ ಆಯುಕ್ತರು, ಜಂಟಿ ಆಯುಕ್ತರು, ಸಹಾಯಕ ಆಯುಕ್ತರ ನೇತೃತ್ವದ ತಂಡಗಳು ಈ ಯೋಜನೆಯ ಸಾಧಕ - ಬಾಧಕಗಳನ್ನು ಅಧ್ಯಯನ ಮಾಡಲು ಬೇರೆ ಬೇರೆ ರಾಜ್ಯಗಳಿಗೆ ತೆರಳಲಿವೆ ಎಂದು ಉನ್ನತ ಮೂಲಗಳು ಈಟಿವಿ ಭಾರತ್ಗೆ ತಿಳಿಸಿವೆ. ದುಬಾರಿ ಬೆಲೆಯ ವಿಸ್ಕಿ, ವೈನ್ ಸೇರಿದಂತೆ ವಿವಿಧ ಮದ್ಯದ ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತ ಮಾಡುವ ಮೂಲಕ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳು ಅಬಕಾರಿ ಆದಾಯದಲ್ಲಿ ಗಣನೀಯ ಏರಿಕೆ ಕಂಡಿವೆ.
ದುಬಾರಿ ಬೆಲೆಯ ಮದ್ಯಕ್ಕಷ್ಟೇ ತೆರಿಗೆ ಕಡಿತ: ಅದೇ ರೀತಿ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ ಒಂದು ಸಾವಿರ, ಎರಡು ಸಾವಿರ ರೂ.ಗಳಷ್ಟು ಕಡಿಮೆ ಆದರೆ ಮದ್ಯದ ಮಾರಾಟ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಆ ಮೂಲಕ ತೆರಿಗೆ ಕಡಿತ ಮಾಡಿದರೂ ಆದಾಯದಲ್ಲಿ ದೊಡ್ಡ ಏರಿಕೆ ಆಗಲಿದೆ ಎಂಬುದು ಸಚಿವರ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.
ಆದರೆ, ಈ ತೆರಿಗೆ ಕಡಿಮೆ ಮುಖಬೆಲೆಯ ಮದ್ಯಕ್ಕೆ ಅನ್ವಯಿಸದಿರಲು ತೀರ್ಮಾನಿಸಲಾಗಿದ್ದು, ದುಬಾರಿ ಬೆಲೆಯ ಮದ್ಯವನ್ನೇ ಕೇಂದ್ರ ಬಿಂದುವನ್ನಾಗಿಟ್ಟುಕೊಳ್ಳಲಾಗಿದೆ. ಈ ಮಧ್ಯೆ ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮದ್ಯದ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡಿದ ಪರಿಣಾಮವಾಗಿ ಅದರ ಅಬಕಾರಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.