ಕರ್ನಾಟಕ

karnataka

ETV Bharat / city

ಬಿಎಸ್​​ವೈಗೆ ಪರ್ಯಾಯ ನಾಯಕತ್ವ... ಹೈಕಮಾಂಡ್​​ನ ತಂತ್ರಗಾರಿಕೆ ಈ ಬಾರಿಯಾದ್ರೂ ಸಫಲವಾಗುವುದೇ? - ಬಿಜೆಪಿ ನಾಯಕತ್ವ ಸುದ್ದಿ

ರಾಜಕೀಯ ಲೆಕ್ಕಾಚಾರಗಳೊಂದಿಗೆ ಬಹಳಷ್ಟು ಅಳೆದು ತೂಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ನಿಗದಿಪಡಿಸಿದೆ. ಅಷ್ಟೇ ಅಲ್ಲ ಜೊತೆ ಜೊತೆಗೆ ಪರ್ಯಾಯ ನಾಯಕನನ್ನೂ ಶೋಧಿಸುತ್ತಿದೆ.

bsy
bsy

By

Published : Jul 24, 2021, 5:15 AM IST

ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವ ಹುಟ್ಟುಹಾಕಲು ಹೈಕಮಾಂಡ್ ರಾಜಕೀಯ ತಂತ್ರಗಾರಿಕೆ ರೂಪಿಸತೊಡಗಿದೆ. ಜನಸಮುದಾಯದ ನಾಯಕರೆಂದು ಗುರುತಿಸಿಕೊಂಡಿದ್ದ ಸಿಎಂ ಯಡಿಯೂರಪ್ಪನವರನ್ನು ಬದಲಾಯಿಸಿ ಅವರ ಸ್ಥಾನದಲ್ಲಿ ಬೇರೊಬ್ಬ ನಾಯಕನಿಗೆ ಅವಕಾಶ ಕೊಟ್ಟು ಬೆಳೆಸುವ ಹೆಕಮಾಂಡ್​ನ​ ಯೋಜನೆ ಫಲಿಸುವುದೇ...? ಎನ್ನುವ ಪ್ರಶ್ನೆ ಈಗ ಮೂಡಿದೆ.

ರಾಜಕೀಯ ಲೆಕ್ಕಾಚಾರಗಳೊಂದಿಗೆ ಬಹಳಷ್ಟು ಅಳೆದು ತೂಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ನಿಗದಿಪಡಿಸಿದೆ. ಅಷ್ಟೇ ಅಲ್ಲ ಜೊತೆ ಜೊತೆಗೆ ಪರ್ಯಾಯ ನಾಯಕನನ್ನೂ ಶೋಧಿಸುತ್ತಿದೆ. ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಉತ್ತರಾಖಂಡ್ ರಾಜ್ಯಗಳಲ್ಲಿ ಮಾಸ್ ಲೀಡರ್​ಗಳನ್ನು ಕಡೆಗಣಿಸಿ ಅಚ್ಚರಿಯ ಅಭ್ಯರ್ಥಿಗಳನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಮಾದರಿಯಲ್ಲಿಯೇ ಕರ್ನಾಟಕಕ್ಕೂ ಸಿಎಂ ಆಯ್ಕೆಯಲ್ಲಿ ಸರ್ಪ್ರೈಸ್ ನೀಡಲು ಪ್ರಧಾನಿ ಮೋದಿ - ಅಮಿತ್ ಷಾ ಜೋಡಿ ತಂತ್ರಗಾರಿಕೆ ರೂಪಿಸತೊಡಗಿದೆ.

ಬಹಳಷ್ಟು ವಿಭಿನ್ನ ರಾಜಕಾರಣ ಮತ್ತು ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕರ್ನಾಟಕದಲ್ಲಿ ಹೊಸ ಹೊಸ ರಾಜಕೀಯ ಪ್ರಯೋಗಗಳನ್ನು ಮಾಡುವುದು ದೆಹಲಿಯ ಬಿಜೆಪಿ ಹೈಕಮಾಂಡ್​​ಗೆ ಅಂದುಕೊಂಡಂತೆ ಸುಲಭವಲ್ಲ. ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಮಹಾನಾಯಕ ಯಡಿಯೂರಪ್ಪ ಅವರನ್ನ ರಾಜಕೀಯವಾಗಿ ನಿರ್ಲಕ್ಷಿಸಿ ಪರ್ಯಾಯ ನಾಯಕನನ್ನು ಬೆಳೆಸುವುದು ಸುಲಭದ ಮಾತಲ್ಲ. ಅದೊಂದು ಸವಾಲಿನ ಕೆಲಸ ಅಂತಾನೂ ಅವರಿಗೆ ಗೊತ್ತು.

ಪರ್ಯಾಯ ನಾಯಕತ್ವದ ಪ್ರಯೋಗಗಳೆಲ್ಲವೂ ವಿಫಲ ...!

ರಾಜ್ಯ ಬಿಜೆಪಿಯಲ್ಲಿ ಅನಭಿಷಕ್ತ ದೊರೆಯಾಗಿ ಬೆಳೆದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕನನ್ನು ಬೆಳೆಸಲು ಸುಮಾರು 20 ವರ್ಷಗಳಿಂದಲೂ ಬಿಜೆಪಿ ಹೈಕಮಾಂಡ್ ಹತ್ತಾರು ರಾಜಕೀಯ ಪ್ರಯೋಗಗಳನ್ನು ಮಾಡಿದೆ. ಆದರೆ ಯಾವ ತಂತ್ರಗಾರಿಕೆಯೂ ನಿರೀಕ್ಷಿತ ಫಲ ನೀಡಿಲ್ಲ. ಲಿಂಗಾಯತ ಮತ್ತು ಲಿಂಗಾಯೇತರ ಸಮುದಾಯಗಳಿಗೆ ಸೇರಿದ ನಾಯಕರಿಗೆ ಪಕ್ಷದಲ್ಲಿ ಮತ್ತು ಬಿಜೆಪಿ ಆಡಳಿತದ ಸರ್ಕಾರದಲ್ಲಿ ಅಧಿಕಾರ ಹಾಗೂ ಪ್ರೋತ್ಸಾಹ ನೀಡಿ ಪರ್ಯಾಯ ನಾಯಕನನ್ನು ಬೆಳೆಸಲು ತರಹೇವಾರಿ ಪ್ರಯೋಗ ನಡೆಸಿದರೂ ಯಡಿಯೂರಪ್ಪನವರಿಗಿದ್ದ ಜನ ಬೆಂಬಲದ ನಡುವೆ ಎಲ್ಲವೂ ಹೈಕಮಾಂಡ್​​ಗೆ ತಿರುಗುಬಾಣವಾದವು.

ಹೈಕಮಾಂಡ್ ಜೊತೆ ಬಿಎಸ್​ವೈ
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬಿಜೆಪಿಯಲ್ಲಿ ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್, ಮಾಜಿ ಮುಖ್ಯಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ್, ಡಿ. ವಿ ಸದಾನಂದ ಗೌಡ, ಮಾಜಿ ಉಪ ಮುಖ್ಯಮಂತ್ರಿಗಳಾಗಿದ್ದ ಸಚಿವ ಆರ್ ಅಶೋಕ, ಕೆ.ಎಸ್.ಈಶ್ವರಪ್ಪ, ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಚಿವರಾದ ಮುರುಗೇಶ ನಿರಾಣಿ , ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಕೇಂದ್ರ ಸಚಿವರಾದ ಬಸನಗೌಡ ಯತ್ನಾಳ್, ಜಿ.ಎಂ.ಸಿದ್ದೇಶ್ ಸೇರಿದಂತೆ ಹಲವು ನಾಯಕರಿಗೆ ಪಕ್ಷದ ಹೈಕಮಾಂಡ್ ಅಧಿಕಾರದ ಅವಕಾಶ ನೀಡಿ ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಯಬಹುದಾ ಎಂದು ಪರೀಕ್ಷಿಸಲಾಯಿತಾದರೂ ಯಾರೊಬ್ಬರೂ ಭರವಸೆ ಮೂಡಿಸಲಿಲ್ಲ. ಜಗದೀಶ ಶೆಟ್ಟರ್:ಲಿಂಗಾಯತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ, ಪ್ರತಿ ಪಕ್ಷ ನಾಯಕನ ಹುದ್ದೆ, ಮುಖ್ಯಮಂತ್ರಿ ಪದವಿಗಳನ್ನ ನೀಡಲಾಯಿತಾದರೂ ಬಿಎಸ್​​ವೈಗೆ ಪರ್ಯಾಯ ನಾಯಕನೆನ್ನುವ ಮಟ್ಟಕ್ಕೆ ಬೆಳೆಯಲು ಸಾದ್ಯವಾಗಲಿಲ್ಲ .ಡಿ.ವಿ.ಸದಾನಂದಗೌಡ:ಹಿರಿಯ ನಾಯಕರ, ಆರ್​ಎಸ್​ಎಸ್​ ಬೆಂಬಲವಿದ್ದ ಡಿ.ವಿ.ಸದಾನಂದ ಗೌಡ ಅವರನ್ನು ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಸಲು ಪಕ್ಷ ಸಾಕಷ್ಟು ಪ್ರಯತ್ನಿಸಿತು . ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನ , ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ನೀಡಲಾದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಅನಂತಕುಮಾರ್:ಬಿಜೆಪಿಯ ಮತ್ತೋರ್ವ ನಾಯಕರಾಗಿದ್ದ ಅನಂತಕುಮಾರ್ ಅವರನ್ನು ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಸಲು ಹೈಕಮಾಂಡ್ ಬಹಳ ಪ್ರಯತ್ನಿಸಿತು.ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ, ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ, ರಾಷ್ಟ್ರೀಯ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಯಿತು. ಒಂದು ಹಂತದಲ್ಲಿ ಅನಂತಕುಮಾರ್ ಅವರು ಯಡಿಯೂರಪ್ಪನವರ ನಂತರದ ಬಿಜೆಪಿ ಹಿರಿಯ ನಾಯಕರಾಗಿಯೂ ಹೊರಹೊಮ್ಮಿದರು. ಆದರೆ ಬ್ರಾಹ್ಮಣರಾಗಿದ್ದ ಅನಂತಕುಮಾರ್ ಅವರಿಗೆ ಜಾತಿ ರಾಜಕಾರಣದಲ್ಲಿ ಜನಬೆಂಬಲ ಸಿಗುವುದು ಕಷ್ಟವೆಂದು ರಾಷ್ಟ್ರ ರಾಜಕಾರಣಕ್ಕೆ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಈ ನಡುವೆ ಯಡಿಯೂರಪ್ಪನವರು ಸಹ ಅನಂತಕುಮಾರ್ ಬಿಜೆಪಿಯಲ್ಲಿ ತಮಗೆ ಪರ್ಯಾಯ ನಾಯಕನಾಗಿ ಸ್ಪರ್ಧೆ ಒಡ್ಡಬಲ್ಲರೆಂದು ತಿಳಿದು ರಾಜ್ಯ ರಾಜಕಾರಣದಲ್ಲಿ ಅನಂತಕುಮಾರ್ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಅನಂತಕುಮಾರ್ ಹೆಗಡೆ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ, ಕಟ್ಟಾ ಹಿಂದುತ್ವವಾದಿಯಾಗಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿ ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಬೆಳೆಸುವ ಪ್ರಯತ್ನವನ್ನೂ ಹೈಕಮಾಂಡ್ ನಡೆಸಿತು. ಆದರೆ ಕೇಂದ್ರ ಸಚಿವರಾಗಿದ್ದಾಗ ಅನಂತಕುಮಾರ್ ಕುಮಾರ್ ಹೆಗಡೆ ಆಡಿದ ವಿವಾದಾತ್ಮಕ ಮಾತುಗಳಿಂದ ಪಕ್ಷ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು. ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮಲಿ ಎಂದು ಮೂರು ಡಿಸಿಎಂ ಪೋಸ್ಟ್​​ಗಳನ್ನು ಸೃಷ್ಟಿಸಿ ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ ಅವರಿಗೆ ಉಪ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಯಿತಾದರೂ ರಾಜಕೀಯ ಪ್ಲಾನ್ ಸಕ್ಸಸ್ ಆಗಲಿಲ್ಲ. ಯಡಿಯೂರಪ್ಪ ಬಿಜೆಪಿ ಬಿಟ್ಟಾಗಲೂ ಹೊರಹೊಮ್ಮದ ನಾಯಕತ್ವ:ದೊಡ್ಡ ಆಲದ ಮರದ ಕೆಳಗೆ ಮತ್ತೊಂದು ಆಲದ ಮರ ಬೆಳೆಯುವುದಿಲ್ಲ ಎನ್ನುವ ಮಾತೊಂದಿದೆ. ಯಡಿಯೂರಪ್ಪನವರು ಪಕ್ಷದಲ್ಲಿ ಯಾವ ನಾಯಕರಿಗೂ ಬೆಳೆಯಲು ಬಿಡುವುದಿಲ್ಲ ಎನ್ನುವ ಅಪವಾದ ಅವರ ಮೇಲಿತ್ತು. ಪಕ್ಷದ ಹೈಕಮಾಂಡ್ ಜತೆಗಿನ ಭಿನ್ನಾಭಿಪ್ರಾಯಗಳಿಂದ ಯಡಿಯೂರಪ್ಪನವರು 2013 ರಲ್ಲಿ ಬಿಜೆಪಿ ಬಿಟ್ಟು ತಮ್ಮದೇ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದಾಗಲೂ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಸರಿಸಮನಾದ ನಾಯಕ ಹುಟ್ಟಲಿಲ್ಲ. ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 224 ರಲ್ಲಿ ಕೇವಲ 44 ಕ್ಷೇತ್ರ ಗೆದ್ದು ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎನ್ನುವ ಸಂದೇಶ ರವಾನೆಯಾಯಿತು. ಸುಮಾರು 20 ವರ್ಷಗಳಿಂದ ನಡೆಸಿದ ಪ್ರಯೋಗಗಳೆಲ್ಲವೂ ಫಲ ನೀಡದೆ ವಿಫಲವಾದ ಬಳಿಕವೂ ಹೈಕಮಾಂಡ್ ಈಗ ಮತ್ತೊಮ್ಮೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪರ್ಯಾಯ ನಾಯಕತ್ವ ಹುಟ್ಟು ಹಾಕುವ ಸಾಹಸಕ್ಕೆ ಕೈಹಾಕಿದ್ದು ಯಶಸ್ಸಿನ ನಿರೀಕ್ಷೆಯಲ್ಲಿದೆ.

ABOUT THE AUTHOR

...view details