ಬೆಂಗಳೂರು:ಕೊರೊನಾ ಭೀತಿಯ ನಡುವೆಯೇ ರೈತರು ಮುಂಗಾರುಪೂರ್ವ ಕೃಷಿ ಚಟುವಟಿಕೆಗೆ ಅಣಿಯಾಗಿದ್ದಾರೆ. ಇತ್ತ ಕೃಷಿ ಇಲಾಖೆ ಕೃಷಿ ಚಟುವಟಿಕೆಗಾಗಿ ಬೇಕಾಗುವ ಯಾವುದೇ ಪರಿಕರಗಳ ಕೊರತೆ ಇಲ್ಲ ಅಂತಿದ್ರೆ, ಅತ್ತ ರೈತರು ಮಾತ್ರ ಆತಂಕದಲ್ಲಿ ಇದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮುಂಗಾರು ಪೂರ್ವ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೂನ್ನಲ್ಲಿ ರೈತರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಿಸಲಿದ್ದಾರೆ. ಮುಂಗಾರು ಪೂರ್ವ ಕೃಷಿ ಚಟುವಟಿಕೆ ಚಾಮರಾಜನಗರ, ಮೈಸೂರು, ತುಮಕೂರು, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿರುತ್ತದೆ. ಇತ್ತ ಕೊರೊನಾ ಭೀತಿ, ಲಾಕ್‌ಡೌನ್ ಪ್ರತಿಕೂಲ ಪರಿಸ್ಥಿತಿಯ ಮಧ್ಯೆಯೇ ರೈತರು ತಮ್ಮ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಇದಕ್ಕಾಗಿ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರವನ್ನು ಸಿದ್ಧಪಡಿಸಿಕೊಂಡಿದೆ.
ಬಿತ್ತನೆ ಬೀಜ ಲಭ್ಯತೆ ಹೇಗಿದೆ?:
ಕೃಷಿ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ಈ ಬಾರಿ ಪೂರ್ವ ಮುಂಗಾರು ಸೇರಿ ಮುಂಗಾರು ಹಂಗಾಮಿನಲ್ಲಿ ಸುಮಾರು 77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಒಟ್ಟು 10.06 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ಸದ್ಯ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗಿದೆ.