ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ವಿಷಯ ತೆಗೆಯುವ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಸಮಿತಿಯನ್ನೂ ಸಹ ಸರ್ಕಾರ ರಚಿಸಿತ್ತು. ಆದ್ರೆ ಈ ವರ್ಷವೂ ಸಹ ಪಠ್ಯದಲ್ಲಿ ಟಿಪ್ಪು ಪಾಠ ಮುಂದುವರೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ ಇಂದು ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪಠ್ಯ ಪುಸ್ತಕ ಸಮಿತಿ ಈಗಾಗಲೇ ವರದಿ ನೀಡಿದೆ. ಸಮಿತಿ ಪಠ್ಯ ತೆಗೆಯಬೇಡಿ ಅಂತ ಶಿಫಾರಸು ಮಾಡಿದೆ. ಟಿಪ್ಪು ಆಡಳಿತದ ಬಗ್ಗೆ ಮಾತ್ರ ಬರೆಯಲಾಗಿದೆ ಅಂತ ತಿಳಿಸಿದೆ. ಹೊಸದಾಗಿ ಯಾವುದೇ ಅಂಶ ಸೇರಿಸಬೇಕಾದ್ರೆ ಹೊಸ ಸಮಿತಿ ಮಾಡಿ, ಅದರ ವರದಿ ತೆಗೆದುಕೊಳ್ಳಿ ಅಂತ ಸಲಹೆ ನೀಡಿದೆ. ಹೀಗಾಗಿ, ಪಠ್ಯ ಪುಸ್ತಕ ಸಮಿತಿಯ ಶಿಫಾರಸನ್ನು ಒಪ್ಪುತ್ತೇನೆ ಅಂತ ತಿಳಿಸಿದ್ರು.
ಹೊಸ ಅಂಶ ಸೇರಿಸಬೇಕಾ?, ಬೇಡವಾ? ಅನ್ನೋದಕ್ಕೆ ಮತ್ತೊಂದು ಸಮಿತಿ ರಚಿಸಬೇಕಿದೆ. ಈ ಸಮಿತಿ ವರದಿ ನಂತರ ಮುಂದಿನ ವರ್ಷಗಳ ಕಾಲ ತೀರ್ಮಾನ ಮಾಡಲಾಗುವುದು. ಈಗಾಗಲೇ ಈ ವರ್ಷದ ಪಠ್ಯಪುಸ್ತಕ ಪ್ರಿಂಟಿಂಗ್ಗೆ ಹೋಗಿದೆ. ಹೀಗಾಗಿ ಈ ಬಾರಿ ಪಠ್ಯದಲ್ಲಿ ಟಿಪ್ಪು ಪಠ್ಯ ತೆಗೆಯೊಲ್ಲ. ಈ ವರ್ಷವೂ ಟಿಪ್ಪು ಪಾಠ ಇರುತ್ತೆ ಅಂತ ಸ್ಪಷ್ಟಪಡಿಸಿದರು.
ಸುರೇಶ್ ಕುಮಾರ್ಗೆ ಪತ್ರ ಬರೆದಿದ್ದ ಅಪ್ಪಚ್ಚು ರಂಜನ್
ಮಾಧ್ಯಮಿಕ ಶಾಲೆಯ ಇತಿಹಾಸ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯವಿದ್ದು, ಅವರ ಕುರಿತಾದ ಇತಿಹಾಸವನ್ನು ಪೂರ್ಣವಾಗಿ ಅರಿಯದೇ ಪಠ್ಯವನ್ನಾಗಿ ಅಳವಡಿಸಲಾಗಿದೆ. ಹಾಗಾಗಿ ಪಠ್ಯದಲ್ಲಿರುವ ಅಂಶಗಳು ಸತ್ಯವಲ್ಲ, ಕೇವಲ ಅದನ್ನು ವೈಭವೀಕರಿಸಿ ಚಿತ್ರಿಸಲಾಗಿದೆ. ಟಿಪ್ಪು ಕನ್ನಡ ವಿರೋಧಿ, ಪರ್ಷಿಯನ್ ಆಡಳಿತಗಾರನಾಗಿದ್ದು, ಇಂತಹ ವ್ಯಕ್ತಿಯ ಕುರಿತು ಇತಿಹಾಸ ಪಠ್ಯವನ್ನು ಮಕ್ಕಳಿಗೆ ಬೋಧಿಸುವುದರಿಂದ ಇಡೀ ನಾಡಿನ-ದೇಶದ ಚರಿತ್ರೆಯನ್ನು ತಿರುಚಿದಂತಾಗುವುದು. ಈ ಪಠ್ಯವನ್ನು ಇತಿಹಾಸ ಪಠ್ಯ ಪುಸ್ತಕದಿಂದ ತೆಗೆದುಹಾಕಿ, ಮುಂದಿನ ಪೀಳಿಗೆಗೆ ದೇಶಪ್ರೇಮ, ರಾಷ್ಟ್ರಭಕ್ತಿ ಮೂಡಿಸುವ ಪಠ್ಯವನ್ನು ಅಳವಡಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಸಚಿವ ಸುರೇಶ್ ಕುಮಾರ್ಗೆ ಪತ್ರ ಬರೆದಿದ್ದರು.
ಶಾಸಕರ ಕೋರಿಕೆಯಂತೆ ಟಿಪ್ಪು ಪಠ್ಯದ ಕುರಿತು, ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ರಚಿಸಿ, ಪಠ್ಯದ ಅಗತ್ಯತೆ ಹಾಗೂ ಅದನ್ನು ಉಳಿಸಿಕೊಳ್ಳುವ ಇಲ್ಲವೇ, ತೆಗೆದು ಹಾಕುವುದರ ಕುರಿತು ಸಾಧಕ-ಬಾಧಕಗಳನ್ನು ಚರ್ಚಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು.