ಕರ್ನಾಟಕ

karnataka

ETV Bharat / city

ಈಗ ಸುಮ್ನಿರೋಣ, ಮುಂದೆ ನಮ್ಗೂ ಒಂದ್‌ಕಾಲ ಬರುತ್ತೆ.. ರಾಹುಲ್ ಗಾಂಧಿಗೆ ಹೆಚ್‌ಡಿಕೆ ಹಿತೋಪದೇಶ! - undefined

ದೇಶದಲ್ಲಿ ಕಾಂಗ್ರೆಸ್​ ನೆಲಕ್ಕಚ್ಚಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ರಾಹುಲ್​ ಗಾಂಧಿ ಬಳಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ. ನೀವು ಪಕ್ಷದ ಅಧ್ಯಕ್ಷ ಸ್ಥಾನ ತೊರೆದರೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕುಸಿದು ಹೋಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ-ಸಿಎಂ ಕುಮಾರಸ್ವಾಮಿ

By

Published : Jun 1, 2019, 5:32 PM IST

Updated : Jun 1, 2019, 5:38 PM IST

ಬೆಂಗಳೂರು :ದೇಶಕ್ಕೀಗ ಕುಟುಂಬ ರಾಜಕಾರಣ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾವ ಕಾರಣಕ್ಕೂ ತೊರೆಯಬೇಡಿ. ತೊರೆದರೆ ಕಾಂಗ್ರೆಸ್ ಪಕ್ಷ ಕುಸಿದು ಹೋಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮೂರು ದಿನಗಳ ಹಿಂದೆ ರಾಹುಲ್​ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದ ಕುಮಾರಸ್ವಾಮಿ, ನೇರವಾಗಿಯೇ ಈ ಮಾತನ್ನು ಹೇಳಿದ್ದು, ಕಾಂಗ್ರೆಸ್ ನಾಯಕತ್ವವನ್ನು ನಿಮ್ಮ ಕುಟುಂಬ ತೊರೆದರೆ ಅದರ ಬಲವೂ ಕುಸಿಯುತ್ತದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ವಿರೋಧವಿತ್ತು. ಅದರ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟವೂ ನಡೆಯಿತು. ಆದರೆ, ಈ ಹೋರಾಟದ ಬೆನ್ನಲ್ಲಿ ಮೇಲೆದ್ದ ಜನತಾಪರಿವಾರದ ಬಹುತೇಕ ಎಲ್ಲ ಪಕ್ಷಗಳೂ, ಕುಟುಂಬ ರಾಜಕಾರಣವನ್ನೇ ನೆಚ್ಚಿಕೊಂಡಿವೆ ಎಂದಿದ್ದಾರೆ.

ಕರ್ನಾಟಕದಲ್ಲಿ ಜನತಾ ಪರಿವಾರವನ್ನು ಉಳಿಸಿಕೊಳ್ಳಲು ನಮ್ಮ ತಂದೆಯವರು ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಜೆಡಿಎಸ್ ಪಕ್ಷವನ್ನು ಕಟ್ಟಿದ ನಂತರ ಹಲವರನ್ನು ಪಕ್ಷದ ಮುಂಚೂಣಿಯಲ್ಲಿ ತಂದು ನಿಲ್ಲಿಸುವ ಯತ್ನ ನಡೆದಿದೆ. ಆದರೆ, ಇಂತಹ ಯತ್ನ ನಿರೀಕ್ಷಿತ ಫಲ ನೀಡಿಲ್ಲ. ಹೀಗಾಗಿ ಏನೇ ಮಾಡಿದರೂ ಪಕ್ಷದ ಉಳಿವಿಗಾಗಿ ನಮ್ಮ ಕುಟುಂಬದವರೇ ಮುಂಚೂಣಿಯಲ್ಲಿ ನಿಲ್ಲುವ ಅನಿವಾರ್ಯತೆ ಇದೆ. ಈ ಪರಿಸ್ಥಿತಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ತಮಿಳುನಾಡಿನಲ್ಲಿ ಡಿಎಂಕೆ, ಒಡಿಶಾದಲ್ಲಿ ನವೀನ್ ಪಾಟ್ನಾಯಕ್‌, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್, ಉತ್ತರಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್, ಜಮ್ಮು-ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಕುಟುಂಬವೇ ಇರಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಾಲಾಗಿದೆ.

ಕುಟುಂಬ ರಾಜಕಾರಣ ಕೇಂದ್ರದ ಅಧಿಕಾರ ಹಿಡಿದಿರುವ ಬಿಜೆಪಿಯನ್ನೂ ಬಿಟ್ಟಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಕ್ಕಳು, ಕುಟುಂಬ ವರ್ಗದವರು ಮೇಲೆದ್ದು ನಿಂತಿದ್ದಾರೆ. ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇದು ಅನಿವಾರ್ಯವೂ ಹೌದು. ಅಂದ ಹಾಗೆ ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯ ರಾಜಕಾರಣದ ಕುಟುಂಬ ಎನ್ನುವ ಮಾತು ಶಕ್ತಿ ಕಳೆದುಕೊಂಡಿದೆ ಎಂದಿದ್ದಾರೆ.

ನೆಹರೂ, ಇಂದಿರಾಗಾಂಧಿ, ರಾಜೀವ್​ ಗಾಂಧಿ, ಸೋನಿಯಾಗಾಂಧಿ ಹಾಗೂ ನೀವು ರಾಜಕಾರಣ ಮಾಡಿದವರು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ಇಷ್ಟೇ ಮಂದಿ ರಾಜಕಾರಣ ಮಾಡಿದ್ದೀರಿ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಹಲವು ಕಾರಣಗಳಿವೆ. ನಮ್ಮ ಪಕ್ಷಕ್ಕೂ ಆಘಾತವಾಗಿದೆ. ಹಾಗಂತ ನಿರಾಶರಾಗಬೇಕಾದ ಅಗತ್ಯವೇನಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ, ಸತತವಾಗಿ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಈಗ ಎನ್​ಡಿಎ ಕೂಡಾ ಅಧಿಕಾರಕ್ಕೆ ಬಂದಿದೆ. ಮುಂದಿನ ಐದು ವರ್ಷಗಳಲ್ಲಿ ಅದರ ವೈಫಲ್ಯ ಎದ್ದು ಕಾಣಲಿದ್ದು, ಯಥಾ ಪ್ರಕಾರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಡುವ ಪರಿಸ್ಥಿತಿಗೆ ಅದು ಬಂದರೆ ಜನ ಕೆರಳುತ್ತಾರೆ. ಹೀಗಾಗಿ ಸನ್ನಿವೇಶಕ್ಕೆ ಅನುಗುಣವಾಗಿ ಮೌನವಾಗಿರೋಣ. ರಾಜ್ಯ ಮಟ್ಟದಲ್ಲಿರುವ ಸರ್ಕಾರಗಳನ್ನು ಬಲಪಡಿಸಿಕೊಂಡು ಮುಂದುವರಿಯೋಣ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಅವರ ಮಾತಿಗೆ ರಾಹುಲ್ ಗಾಂಧಿ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Last Updated : Jun 1, 2019, 5:38 PM IST

For All Latest Updates

TAGGED:

ABOUT THE AUTHOR

...view details