ಕರ್ನಾಟಕ

karnataka

ETV Bharat / city

ವಿಧಾನ ಪರಿಷತ್​​ನಲ್ಲಿ ಖಾಲಿಯಾಗುವ ಸ್ಥಾನಗಳೆಷ್ಟು?: ರಾಜಕೀಯ ಲೆಕ್ಕಾಚಾರ ಆರಂಭ! - What are the number of vacant seats in the Vidhan Sabha?

ಜೂನ್‌ ತಿಂಗಳಿನಲ್ಲಿ ಖಾಲಿಯಾಗುವ ಸ್ಥಾನಗಳ ಬಗ್ಗೆ ವಿಧಾನ ಪರಿಷತ್​​ನಿಂದ ಚುನಾವಣಾ ಆಯೋಗಕ್ಕೆ ಮಾಹಿತಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

What are the number of vacant seats in the Vidhan Sabha?
ವಿಧಾನ ಪರಿಷತ್

By

Published : May 16, 2020, 3:52 PM IST

Updated : May 16, 2020, 4:25 PM IST

ಬೆಂಗಳೂರು: ಕೊರೊನಾ‌ ಎಫೆಕ್ಟ್​​​ನಿಂದ ಮಂಕಾಗಿದ್ದ ರಾಜ್ಯ ರಾಜಕಾರಣದ ಚಟುವಟಿಕೆಗಳು ನಿಧಾನವಾಗಿ ಚುರುಕುಗೊಳ್ಳುತ್ತಿವೆ.

ರಾಜ್ಯದಲ್ಲಿ ಬಿಬಿಎಂಪಿ, ಗ್ರಾಮ ಪಂಚಾಯತ್​ ಹಾಗೂ ವಿಧಾನ ಪರಿಷತ್​​ನ ಚುನಾವಣೆಗಳು ನಡೆಯಬೇಕಿದೆ. ಆದರೆ, ಗ್ರಾಮ ಪಂಚಾಯತ್​ ಚುನಾವಣೆ ಮುಂದೂಡುವಂತೆ ಈಗಾಗಲೇ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ಇನ್ನೂ ಅಸ್ಪಷ್ಟವಾಗಿದೆ. ಆದರೆ, ವಿಧಾನ ಪರಿಷತ್​​​ನ 16 ಸ್ಥಾನಗಳು ಜೂನ್ ತಿಂಗಳಲ್ಲಿ ಖಾಲಿಯಾಗಲಿವೆ.

ತೆರವಾಗುವ ಸ್ಥಾನಗಳ ಬಗ್ಗೆ ವಿಧಾನ ಪರಿಷತ್​​ನಿಂದ ಚುನಾವಣಾ ಆಯೋಗಕ್ಕೆ ಮಾಹಿತಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಲಾಕ್​​​ಡೌನ್‌ ಜಾರಿಯಲ್ಲಿರುವುದರಿಂದ ಜೂನ್​​ನಲ್ಲಿ ಖಾಲಿಯಾಗುವ ಸ್ಥಾನಗಳಿಗೆ ನಿಗದಿತ ಅವಧಿಯಲ್ಲೇ ಚುನಾವಣೆ ನಡೆಸುವ ಕುರಿತು ಕೇಂದ್ರ ಚುನಾವಣಾ ಆಯೋಗ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಇದರ ಜೊತೆಗೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸಬೇಕಿದೆ. ಒಂದು ವೇಳೆ ಲಾಕ್​​ಡೌನ್ ಸಡಿಲಿಕೆಯಾದರೆ ವಿಧಾನಪರಿಷತ್​ಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ನಿವೃತ್ತಿಯಾಗುವ ಸದಸ್ಯರು

ವಿಧಾನಸಭೆಯಿಂದ ವಿಧಾನ ಪರಿಷತ್​​​ಗೆ ಚುನಾಯಿತರಾಗಿದ್ದ ಸದಸ್ಯರಾದ ಜಯಮ್ಮ (ಕಾಂಗ್ರೆಸ್), ಎನ್.ಎಸ್. ಬೋಸರಾಜು (ಕಾಂಗ್ರೆಸ್), ಹೆಚ್.ಎಂ. ರೇವಣ್ಣ (ಕಾಂಗ್ರೆಸ್), ನಜೀರ್ ಅಹಮದ್ (ಕಾಂಗ್ರೆಸ್), ಎಂ.ಸಿ. ವೇಣುಗೋಪಾಲ್ (ಕಾಂಗ್ರೆಸ್), ಟಿ.ಎ. ಶರವಣ (ಜೆಡಿಎಸ್), ಡಿ.ಯು. ಮಲ್ಲಿಕಾರ್ಜುನ್​​​ (ಪಕ್ಷೇತರ) ಅವರು ನಿವೃತ್ತಿಯಾಗಲಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಆರ್. ಚೌಡರೆಡ್ಡಿ ತೂಪಲ್ಲಿ (ಜೆಡಿಎಸ್), ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್.ವಿ. ಸಂಕನೂರ (ಬಿಜೆಪಿ) ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ (ಜೆಡಿಎಸ್ ನಲ್ಲಿದ್ದವರು), ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶರಣಪ್ಪ ಮಟ್ಟೂರ್ (ಕಾಂಗ್ರೆಸ್) ಅವರು ಜೂ.30ರಂದು ನಿವೃತ್ತಿಯಾಗಲಿದ್ದಾರೆ.

ನಾಮ ನಿರ್ದೇಶಿತ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಡಾ. ಜಯಮಾಲಾ, ಐವಾನ್ ಡಿಸೋಜಾ, ಇಕ್ಬಾಲ್ ಅಹಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಅವರು ಜೂ.23ರಂದು ನಿವೃತ್ತಿ ಹೊಂದಲಿದ್ದಾರೆ.

ಖಾಲಿ ಸ್ಥಾನವೆಷ್ಟು?

ಖಾಲಿಯಾಗುವ 16 ಸ್ಥಾನಗಳಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೆ 7 ಸ್ಥಾನ, ರಾಜ್ಯಪಾಲರಿಂದ ನಾಮ ನಿರ್ದೇಶನಗೊಳ್ಳುವ 5 ಸ್ಥಾನ, 2 ಪದವೀಧರ ಕ್ಷೇತ್ರ, 2 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಈಗಾಗಲೇ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧತೆ ನಡೆಸಲಾಗಿದೆ.

ಐದು ಸದಸ್ಯರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ವಿಧಾನ ಪರಿಷತ್‍ನಲ್ಲಿ ಆಡಳಿತ ರೂಢ ಬಿಜೆಪಿ 19, ಕಾಂಗ್ರೆಸ್ 37, ಜೆಡಿಎಸ್ 16, ಪಕ್ಷೇತರಿಬ್ಬರು ಸದಸ್ಯರಿದ್ದಾರೆ. ಜೂನ್ ನಂತರ ವಿಧಾನ ಪರಿಷತ್ತಿನ ರಾಜಕೀಯ ಪಕ್ಷಗಳ ಸಂಖ್ಯಾಬಲ ಬದಲಾವಣೆಯಾಗಲಿದೆ.

ವಿಧಾನಸಭೆಯಿಂದ ಚುನಾಯಿತರಾಗಿದ್ದ 7 ಮಂದಿ ಸದಸ್ಯರು ನಿವೃತ್ತಿಯಾಗುವುದರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆದರೆ ಆಡಳಿತರೂಢ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲಿದೆ. ವಿಧಾನಸಭೆಯಲ್ಲಿ ಹೊಂದಿರುವ ಸದಸ್ಯ ಬಲದ ಆಧಾರದಲ್ಲಿ 3 ರಿಂದ 4 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನಗಳಲ್ಲಿ ಗೆಲ್ಲಬಹುದಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಗೆ ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ರಾಜ್ಯದಲ್ಲಿಯೂ ಚುನಾವಣೆ ನಡೆಸಬಹುದೆಂಬ ನಿರೀಕ್ಷೆ ಆಕಾಂಕ್ಷಿಗಳಲ್ಲಿದೆ. ಈಗ ಎಲ್ಲರ ಚಿತ್ತ ಚುನಾವಣಾ ಆಯೋಗದತ್ತ ನೆಟ್ಟಿದೆ.

Last Updated : May 16, 2020, 4:25 PM IST

ABOUT THE AUTHOR

...view details