ಬೆಂಗಳೂರು: ವಿಧಾನಸಭೆಯಲ್ಲಿ ಸೋಮವಾರ ಕೆಲ ಪ್ರಮುಖ ವಿಧೇಯಕಗಳು ಮಂಡನೆಯಾಗಿವೆ.
ಅದರಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ವಿಧೇಯಕ, ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ರೇಸ್ ಕೋರ್ಸ್ ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕಳು ಪ್ರಮುಖವಾಗಿವೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ವಿಧೇಯಕ:
ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ವಿಧೇಯಕವನ್ನು ಮಂಡಿಸಲಾಯಿತು. ಈ ವಿಧೇಯಕದ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನವನ್ನು ನಿಯಂತ್ರಿಸಲಾಗತ್ತದೆ. ಅದರಂತೆ ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2016 ರ ಮುನ್ನ ನಿವೃತ್ತರಾದ ಪ್ರಾಧ್ಯಾಪಕರಿಗೆ ಕಹಿ ಸುದ್ದಿ ಸಿಗಲಿದೆ.
ಇಲ್ಲಿವೆರೆಗೆ ನಿವೃತ್ತ ಪ್ರಾಧ್ಯಾಪಕರಿಗೆ ಯುಜಿಸಿ ಪರಿಷ್ಕೃತ ವೇತನ ಆಯೋಗದ ಮಾನದಂಡದ ಆಧಾರದ ಮೇಲೆ ಪಿಂಚಣಿ ನೀಡಲಾಗುತ್ತಿದೆ. ಇದರಿಂದ ಇಲಾಖೆಗೆ ಸಾಕಷ್ಟು ಹೊರೆಯಾಗುವುದರಿಂದ 'ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರ ಪಾವತಿ ಮತ್ತು ಪಿಂಚಣಿ ನಿಯಂತ್ರಣ ಮಸೂದೆ -2020’ ಜಾರಿಗೆ ತರುವ ಮೂಲಕ ಪಿಂಚಣಿ ನಿಯಂತ್ರಿಸಲಾಗುತ್ತದೆ. ಆ ಮೂಲಕ ಯುಜಿಸಿಯ ಪರಿಷ್ಕೃತ ವೇತನದ ಮುನ್ನ ನಿವೃತ್ತಿ ಹೊಂದಿದ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಪರಿಷ್ಕೃತ ವೇತನ ಆಧಾರದಲ್ಲಿ ಪಿಂಚಣಿಯನ್ನು ನೀಡಲಾಗುವುದಿಲ್ಲ.
ಕರ್ನಾಟಕ ರೇಸ್ ಕೋರ್ಸ್ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ:
ಸೋಮವಾರ ಕರ್ನಾಟಕ ರೇಸ್ ಕೋರ್ಸ್ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕವನ್ನೂ ಮಂಡಿಸಲಾಯಿತು. ಅದರಂತೆ ಕುದುರೆ ರೇಸಿಂಗ್ನ ಪರವಾನಗಿ ನೀಡುವಿಕೆ, ನಿಯಂತ್ರಿಸಲು ಅಧಿಕಾರಿಗೆ ಅಧಿಕಾರ ನೀಡುವುದು ಹಾಗೂ ದಂಡದ ಮೊತ್ತವನ್ನು ಹೆಚ್ಚಿಸಲು ತಿದ್ದುಪಡಿ ತರಲಾಗಿದೆ. ಈ ವಿಧೇಯಕದ ಪ್ರಕಾರ ಪರವಾನಗಿ ಹೊಂದಿಲ್ಲದ ರೇಸ್ ಕೋರ್ಸ್ ನ ಕುದುರೆ ರೇಸ್ ನಲ್ಲಿ ಭಾಗವಹಿಸಿದ್ದಕ್ಕಾಗಿ ಐವತ್ತು ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಮಂಡನೆ:
ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಅಧಿ ನಿಯಮಕ್ಕೆ ತಿದ್ದುಪಡಿ ಮಾಡುವ ಹಿನ್ನೆಲೆ ಈ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದೆ. ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ಅಧಿನಿಯಮ 2002 ರ ಅಡಿಯಲ್ಲಿನ ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದಿಸಿದ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿಯನ್ನು ಖರೀದಿಸಲು ವಿನಾಯಿತಿ ನೀಡಲು ಈ ವಿಧೇಯಕ ತರಲಾಗಿದೆ.
ಅದರಂತೆ ಯಾವುದೇ ಕಂಪನಿ ಅಥವಾ ಸಂಸ್ಥೆಯು ಭೂಮಿಯನ್ನು ಖರೀದಿಸಿ ಮತ್ತು ಖರೀದಿ ಉದ್ದೇಶಕ್ಕಾಗಿ ಏಳು ವರ್ಷಗಳಿಗೆ ಕಡಿಮೆಯಿಲ್ಲದಂತೆ ಭೂಮಿಯನ್ನು ಬಳಸಿದ ಬಳಿಕ, ಆ ಭೂಮಿಯನ್ನು ಬಳಕೆ ಮಾಡದೇ ಇದ್ದಲ್ಲಿ, ಆ ಸಂಸ್ಥೆ ಅರ್ಜಿ ಸಲ್ಲಿಸಿದರೆ ಸರ್ಕಾರ ಅನುಮತಿಸಿದರೆ ಭೂಮಿಯನ್ನು ಇತರೆ ಕಂಪನಿಗೆ ಮಾರಾಟ ಮಾಡಬಹುದು. ಈ ವಿಧೇಯಕ ಕೈಗಾರಿಕಾ ಅಭಿವೃದ್ಧಿಯ ಸಣ್ಣ ಖನಿಜಗಳ ಗಣಿಗಾರಿಕೆ, ಕಲ್ಲುಪುಡಿ ಮಾಡುವ ಘಟಕಗಳು, 40ಘಟಕಗಳಿಗಿಂತ ಹೆಚ್ಚಿಲ್ಲದ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡಲು ಅನುಮತಿ ನೀಡಲಿದೆ. ಕಂಪನಿಯ ವಿಸ್ತರಣೆ ಉದ್ದೇಶಕ್ಕಾಗಿ ಅಥವಾ ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವುದಕ್ಕಾಗಿ ಯಾವುದೇ ಸಂಸ್ಥೆ ಅನುಮತಿಯನ್ನು ಪಡೆದ ದಿನಾಂಕದಿಂದ ಏಳು ವರ್ಷಗಳ ಅವಧಿಯ ತರುವಾಯ ಅರ್ಜಿಯನ್ನು ಸಲ್ಲಿಸಿದಾಗ ಅದನ್ನು ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಉನ್ನತಾಧಿಕಾರಿಗಳ ಸಮಿತಿ ಯೋಗ್ಯವೆನಿಸಿದ್ದಲ್ಲಿ ಷರತ್ತಿಗೊಳಪಟ್ಟು ಭೂಮಿಯನ್ನು ಮಾರಾಟ ಮಾಡಲು ವಿಧೇಯಕದ ಅಡಿ ಅನುಮತಿ ನೀಡಬಹುದಾಗಿದೆ.