ಬೆಂಗಳೂರು:ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯವಾಗದೇ 24 ಕೋವಿಡ್ ಸೋಂಕಿತ ರೋಗಿಗಳು ಸಾನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ನ್ಯಾಯಾಂಗ ತನಿಖೆ ಏಕೆ, ಹೇಗೆ ಮತ್ತು ಸವಾಲುಗಳೇನು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಮೇ 2ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪಿದ ದುರಂತವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ವಿಪಕ್ಷಗಳು ಒತ್ತಾಯಿಸಿದ್ದವು. ಮೇ.4ರಂದು ಹೈಕೋರ್ಟ್ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಅಗತ್ಯವಿದೆ ಎಂದಿತ್ತಲ್ಲದೇ, ಈ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಮೇ 5ರಂದು ಹೈಕೋರ್ಟ್ಗೆ ಮಾಹಿತಿ ನೀಡಿದ್ದ ಅಡ್ವೊಕೇಟ್ ಜನರಲ್ ನ್ಯಾಯಾಂಗ ತನಿಖೆ ನಡೆಸಲು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎ ಪಾಟೀಲ್ ಅವರ ಏಕ ವ್ಯಕ್ತಿ ಆಯೋಗ ರಚಿಸಿರುವುದಾಗಿ ತಿಳಿಸಿತ್ತು. ಇದೀಗ ಆಯೋಗ ತನ್ನ ತನಿಖಾ ಕಾರ್ಯವನ್ನ ಆರಂಭಿಸಿದೆ.
ನ್ಯಾಯಾಂಗ ತನಿಖೆ :
ರಾಜ್ಯ ಸರ್ಕಾರ ಮೇ. 5ರಂದು 'ವಿಚಾರಣಾ ಆಯೋಗ ಕಾಯ್ದೆ-1952'ರ ಪ್ರಕಾರ ನ್ಯಾ. ಬಿ.ಎ ಪಾಟೀಲ್ ಅವರ ಏಕ ವ್ಯಕ್ತಿ ಆಯೋಗವನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ನ್ಯಾ, ಪಾಟೀಲ್ ಅವರ ಆಯೋಗ ಪ್ರಕರಣದ ತನಿಖೆ ನಡೆಸಲಿದೆ. ನ್ಯಾಯಾಂಗ ತನಿಖೆಯ ಪ್ರಕ್ರಿಯೆ ಮೇಲ್ನೋಟಕ್ಕೆ ಇತರೆಲ್ಲ ತನಿಖಾಧಿಕಾರಿಗಳ ಅಥವಾ ತನಿಖಾ ಏಜೆನ್ಸಿಗಳ ರೀತಿಯಲ್ಲೇ ಇರುತ್ತದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯುವುದರಿಂದಷ್ಟೇ ಇದನ್ನು ನ್ಯಾಯಾಂಗ ತನಿಖೆ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ಇತರೆಲ್ಲ ತನಿಖಾಧಿಕಾರಿಗಳಿಗಿಂತ ನ್ಯಾಯಾಂಗ ತನಿಖೆ ನಡೆಸುವ ಆಯೋಗಕ್ಕೆ ಹೆಚ್ಚಿನ ಅಧಿಕಾರ ಇರುತ್ತದೆ. ಮುಖ್ಯವಾಗಿ ನ್ಯಾಯಾಂಗ ತನಿಖೆಯು ಸಹಜ ನ್ಯಾಯ ತತ್ವಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ ಎನ್ನುತ್ತಾರೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.
ಆಯೋಗದ ಅಧಿಕಾರಗಳೇನು?
ಕಾಯ್ದೆ ಅಡಿ ರಚಿಸುವ ಕಮಿಷನ್ಗೆ ಸಿವಿಲ್ ಕೋರ್ಟ್ಗೆ ಇರುವಷ್ಟೇ ಅಧಿಕಾರಗಳನ್ನು ನೀಡಲಾಗಿರುತ್ತದೆ. ಅದರಂತೆ ಆಯೋಗ ಯಾವುದೇ ವ್ಯಕ್ತಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಬಹುದಾಗಿದೆ. ಯಾವುದೇ ದಾಖಲೆಗಳನ್ನು ಹಾಜರುಪಡಿಸುವಂತೆ ನಿರ್ದೇಶಿಸಬಹುದಾಗಿದೆ. ಸಾಕ್ಷ್ಯಗಳನ್ನು ಪ್ರಮಾಣಪತ್ರಗಳ ಮೂಲಕ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ. ಯಾವುದೇ ಕೋರ್ಟ್, ಕಚೇರಿಗೆ ದಾಖಲೆಗಳನ್ನು ನೀಡುವಂತೆ ಕೋರುವ, ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಪರೀಕ್ಷೆಗೆ ಒಳಪಡಿಸುವ ವಿಶೇಷ ಅಧಿಕಾರ ಆಯೋಗಕ್ಕಿದೆ. ಇನ್ನು, ತನಿಖೆಗೆ ನಿರ್ದಿಷ್ಟ ವಿಷಯಗಳಲ್ಲಿ ವಿಶೇಷ ಜ್ಞಾನ ಹೊಂದಿರುವವರನ್ನು ಬಳಸಿಕೊಳ್ಳುವ ಅವಕಾಶವನ್ನೂ ನೀಡಲಾಗುತ್ತದೆ.
ಆಯೋಗದಿಂದ ತನಿಖೆ :ಹೈಕೋರ್ಟ್ ಈಗಾಗಲೇ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದು, ಈ ಎಲ್ಲ ದಾಖಲೆಗಳನ್ನು ಆಯೋಗ ತನ್ನ ವಶಕ್ಕೆ ಪಡೆಯಲಿದೆ. ಇದರ ಹೊರತಾಗಿ ಉಳಿದಿರಬಹುದಾದ ದಾಖಲೆಗಳನ್ನು ಆರೋಗ್ಯ ಇಲಾಖೆಯಿಂದ, ಮೈಸೂರು, ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಗಳಿಂದ, ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ, ಆಕ್ಸಿಜನ್ ಪೂರೈಕೆ ಏಜೆನ್ಸಿಗಳಿಂದ ವಶಕ್ಕೆ ತೆಗೆದುಕೊಳ್ಳಲಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿಗಳು, ಆಕ್ಸಿಜನ್ ಪೂರೈಕೆದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ಈ ಹೇಳಿಕೆಗಳನ್ನು ಪ್ರಮಾಣ ಪತ್ರದ ಮೂಲಕ ತೆಗೆದುಕೊಳ್ಳಲಿದೆ.