ಕರ್ನಾಟಕ

karnataka

ETV Bharat / city

100 ದಿನಗಳ ಸಂಭ್ರಮದಲ್ಲಿರುವ ಬೊಮ್ಮಾಯಿ ಸರ್ಕಾರ ಎದುರಿಸಿದ ಸವಾಲು-ಸಂಕಷ್ಟಗಳು ನೂರೆಂಟು

ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೊಮ್ಮಾಯಿ ಅನಿರೀಕ್ಷಿತವಾಗಿ ಸಿಎಂ ಪಟ್ಟ ಅಲಂಕರಿಸಿದರು. ಇಂದು ಬೊಮ್ಮಾಯಿ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಿದ್ದು, ಸರ್ಕಾರ ಎದುರಿಸಿದ ಸವಾಲುಗಳ ಮಾಹಿತಿ ಇಲ್ಲಿದೆ ನೋಡಿ.

Bommai
Bommai

By

Published : Nov 4, 2021, 2:34 PM IST

ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಅನಿರೀಕ್ಷಿತವಾಗಿ ಸಿಎಂ ಪಟ್ಟ ಅಲಂಕರಿಸಿರುವ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಶತಕದ ಸಂಭ್ರಮ. ನೂರು ದಿನಗಳ ತಮ್ಮ ಅಧಿಕಾರಾವಧಿಯಲ್ಲಿ ಸಿಎಂ ನೂರೆಂಟು ಸವಾಲುಗಳನ್ನು ಎದುರಿಸಬೇಕಾಯಿತು.

ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೊಮ್ಮಾಯಿ ಅನಿರೀಕ್ಷಿತವಾಗಿ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಕ್ಷಿಪ್ರ ರಾಜಕೀಯ ಬದಲಾವಣೆಯಿಂದ ಅಧಿಕಾರ ಸ್ವೀಕರಿಸಿದ ಸಿಎಂ ಬೊಮ್ಮಾಯಿ ಸರ್ಕಾರ, ಇದೀಗ ಶತದಿನಗಳನ್ನು ಪೂರೈಸಿದೆ. ಜನಪರ ಆಡಳಿತ ಘೋಷಣೆಯೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಬೊಮ್ಮಾಯಿ ಸರ್ಕಾರಕ್ಕೆ ಆಡಳಿತದ ಹಾದಿ ಹುಲ್ಲಿನ ಹಾಸಿಗೆ ಆಗಿರಲಿಲ್ಲ. ಶತದಿನದ ತಮ್ಮ ಆಡಳಿತದಲ್ಲಿ ಏರುಪೇರು, ಸವಾಲುಗಳನ್ನು ಎದುರಿಸಬೇಕಾಯಿತು. ಹೊಸತನ, ಹೊಸ ಘೋಷಣೆಗಳ ಜೊತೆ ಅನೇಕ ಸವಾಲುಗಳೊಂದಿಗೆ ಬೊಮ್ಮಾಯಿ ಸರ್ಕಾರ ಆಡಳಿತದ ಹಳಿಯಲ್ಲಿ ಸಾಗುತ್ತಿದೆ.

ಬೊಮ್ಮಾಯಿಗೆ ಅಗ್ನಿಪರೀಕ್ಷೆ:

ಬಸವರಾಜ ಬೊಮ್ಮಾಯಿ ಅನಿರೀಕ್ಷಿತವಾಗಿ ಸಿಎಂ ಪದಗ್ರಹಣ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿಗೆ ಸಿಎಂ ಪಟ್ಟ ‌ನೀಡಲು ನಿರ್ಧರಿಸಿತು. ಅದರಂತೆ ಬೊಮ್ಮಾಯಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಯಡಿಯೂರಪ್ಪರಂತಹ ನಾಯಕನ ಸ್ಥಾನ ತುಂಬಿಸುವ ಸವಾಲಿನ ಕೆಲಸದ ಜೊತೆಗೆ ಸಹದ್ಯೋಗಿಗಳನ್ನು ಒಟ್ಟಿಗೆ ಕೊಂಡೊಯ್ಯುವ ಅಗ್ನಿಪರೀಕ್ಷೆಯನ್ನು ಹೊಂದಿದ್ದರು. ಆಂತರಿಕ ವೈಮನಸ್ಸು, ಬಣಗಳನ್ನು ಒಟ್ಟಾಗಿ ಕೊಂಡೊಯ್ಯುವ ದೊಡ್ಡ ಸವಾಲು ಬೊಮ್ಮಾಯಿ ಸರ್ಕಾರದ್ದಾಗಿತ್ತು. ಅನೇಕ ಬಣ, ಬಂಡಾಯ, ಅತೃಪ್ತಿಗಳನ್ನು ಶಮನಗೊಳಿಸಿ, ಎಲ್ಲರನ್ನೂ ಸಮಾಧಾನ ಪಡಿಸಿ ಒಗ್ಗಟ್ಟು ಪ್ರದರ್ಶಿಸುವುದರಲ್ಲಿ ಬೊಮ್ಮಾಯಿ ಸರ್ಕಾರ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

ಸಂಪುಟ ರಚನೆಯ ಸವಾಲು:

ಸಿಎಂ ಪಟ್ಟವೇರಿದ ಬೊಮ್ಮಾಯಿ ಮುಂದೆ ಇದ್ದ ಅತಿ ದೊಡ್ಡ ಸವಾಲು ನೂತನ ಸಂಪುಟ ರಚನೆ. ಆಕಾಂಕ್ಷಿಗಳ ಪಟ್ಟಿ ಹಿರಿದಾಗಿತ್ತು. ಆದರೆ, ಎಲ್ಲಾ ಜಾತಿ, ಪ್ರದೇಶವಾರನ್ನು ಗಮನದಲ್ಲಿರಿಸಿ ಸಂಪುಟ ರಚನೆ ಮಾಡುವುದು ಅನಿವಾರ್ಯವಾಗಿತ್ತು.

ಸುಗಮ ಸಂಪುಟ ರಚನೆಗಾಗಿ ಹೈ ಕಮಾಂಡ್ ಬಾಗಿಲು ತಟ್ಟಿದ ಬೊಮ್ಮಾಯಿ ಸರ್ಕಾರ, ಆಕಾಂಕ್ಷಿಗಳ ಬಂಡಾಯದ ಬಿಸಿಯನ್ನು ತಣ್ಣಗಾಗಿಸುವ ಮಹಾ ಸವಾಲನ್ನು ಎದುರಿಸಬೇಕಾಯಿತು. ಹೈಕಮಾಂಡ್ ತಾಕೀತು ಮೇರೆಗೆ ಅಳೆದು ತೂಗಿ ಸಮತೋಲಿತ ಸಂಪುಟ ರಚಿಸುವಲ್ಲಿ ಯಶಸ್ಸು ಕಂಡರು. ಆದರೆ ಬಳಿಕ ಸಚಿವ ಸ್ಥಾನ ಕೈ ತಪ್ಪಿದವರ ಬಂಡಾಯದ ಕಿಡಿಯನ್ನು ಅಷ್ಟೇ ಬೇಗ ಶಮನಗೊಳಿಸುವ ಅನಿವಾರ್ಯತೆಯೂ ಎದುರಾಯಿತು.

ಸಂಪುಟ ರಚನೆಯ ಅಗ್ನಿ ಪರೀಕ್ಷೆಯ ಬಳಿಕ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದ್ದು ಖಾತೆ ಹಂಚಿಕೆಯೆ ವಿಘ್ನ. ಹಿರಿಯ ಸಚಿವರು ಹಾಗೂ ನೂತನ ಸಚಿವರಿಗೆ ಸಮತೋಲಿತ ಖಾತೆಗಳನ್ನು ನೀಡುವ ಸಂದಿಗ್ಧ ಪರಿಸ್ಥಿತಿ ಸಿಎಂ ಬೊಮ್ಮಾಯಿ ಸರ್ಕಾರದ್ದಾಗಿತ್ತು. ಕೊನೆಗೆ ಹೈ ಕಮಾಂಡ್ ಅಣತಿಯಂತೆ ಖಾತೆ ಹಂಚಿಕೆ ಮಾಡಲಾಯಿತು.‌ ಕೆಲವರು ತಮಗೆ ನೀಡಿದ ಖಾತೆ ಹಂಚಿಕೆಯಿಂದ ಅತೃಪ್ತರಾದರು, ಅನಿವಾರ್ಯವಾಗಿ ಅಧಿಕಾರ ಸ್ವೀಕಾರ ಮಾಡಿದರು. ಇತ್ತ ಆನಂದ್ ಸಿಂಗ್ ತಮಗೆ ನೀಡಿದ ಪ್ರವಾಸೋದ್ಯಮ ಖಾತೆ ಬಗ್ಗೆ ಕ್ಯಾತೆ ತೆಗೆದರು. ಇದರಿಂದ ಬೊಮ್ಮಾಯಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಯಿತು. ಬಳಿಕ ಹೈ ಕಮಾಂಡ್ ಕಟ್ಟಪ್ಪಣೆಯ ಮುಂದೆ ಆನಂದ್ ಸಿಂಗ್ ತಮಗೆ ನೀಡಿದ ಖಾತೆಯನ್ನು ವಹಿಸಿಕೊಳ್ಳಲೇಬೇಕಾಯಿತು.

ಆರ್ಥಿಕ ಸಂಕಷ್ಟದ ಬರೆ:

ಬೊಮ್ಮಾಯಿ ಸರ್ಕಾರವನ್ನು ಅತಿಯಾಗಿ ಕಾಡಿರುವುದು ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟದ ಬರೆ. ಎರಡನೇ ಅಲೆಗೆ ಹೇರಿದ ಲಾಕ್‌ಡೌನ್​, ಆಗಲೇ ಸೊರಗಿದ ಬೊಕ್ಕಸವನ್ನು‌ ಮತ್ತಷ್ಟು ಮಂಡಿಯೂರುವಂತೆ ಮಾಡಿತು. ಇದರಿಂದ ಬೊಮ್ಮಾಯಿ ಸರ್ಕಾರಕ್ಕೆ ಹಣಕಾಸು ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿತು.

ಇತ್ತ ಅಧಿಕಾರ ಸ್ವೀಕರಿಸಿದಾಗಿನಿಂದ ಪದೇ‌ ಪದೆ ದೆಹಲಿ ಬಾಗಿಲು ತಟ್ಟುತ್ತಿರುವ ಸಿಎಂ ಬೊಮ್ಮಾಯಿ, ಕೇಂದ್ರ ಸರ್ಕಾರದ ಬಳಿ ನೆರವಿನ ಮೊರೆ ಇಡುತ್ತಲೇ ಬಂದಿದ್ದಾರೆ. ವೆಚ್ಚ ಕಡಿತ, ಇತಿ ಮಿತಿಯೊಳಗೆ ಹಣಕಾಸು ನಿರ್ವಹಿಸಿ, ಬಜೆಟ್ ಅನುಷ್ಠಾನ ಮಾಡುವ ಅನಿವಾರ್ಯತೆ ಎದುರಿಸುತ್ತಿರುವ ಸರ್ಕಾರ ಶತ ದಿನಗಳ ಆಡಳಿತಕ್ಕೆ ಹಣಕಾಸು ನಿರ್ವಹಣೆ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಜಿಎಸ್​ಟಿ ಪರಿಹಾರ ಹಣ ಬಿಡುಗಡೆ, ನೆರೆ ಪರಿಹಾರ ಬಿಡುಗಡೆ ಹಾಗೂ ನಿಧಾನವಾಗಿ ಚೇತರಿಕೆಯಾಗುತ್ತಿರುವ ಆರ್ಥಿಕ ಪರಿಸ್ಥಿತಿಯಿಂದ ಸರ್ಕಾರ ಇದೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದರೂ ಆರ್ಥಿಕ ಸಂಕಷ್ಟ ನಿಭಾಯಿಸುವುದು ಬೊಮ್ಮಾಯಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲೂ ದೊಡ್ಡ ಸವಾಲಾಗಿಯೇ ಉಳಿಯಲಿದೆ.

ಮೀಸಲಾತಿ ಹೋರಾಟದ ಕಿಚ್ಚು:

ಇತ್ತ ಪಂಚಮಸಾಲಿ ಮೀಸಲಾತಿ ಹೋರಾಟದ ಕಿಚ್ಚು ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಸವಾಲಿನ ವಿಚಾರವಾಗಿತ್ತು. ಪಂಚಮಸಾಲಿ ಜೊತೆಗೆ ವಿವಿಧ ಸಮುದಾಯಗಳು ಮೀಸಲಾತಿ ಕೂಗನ್ನು ಮತ್ತಷ್ಟು ಗಟ್ಟಿಗೊಳಿಸಿದ್ದವು.

ಅತಿ ಸೂಕ್ಷ್ಮ ವಿಚಾರವಾದ ಮೀಸಲಾತಿ ಕೂಗನ್ನು ಜಾಗರೂಕವಾಗಿ ನಿಭಾಯಿಸುವ ಸಂದಿಗ್ಧ ಪರಿಸ್ಥಿತಿ ಬೊಮ್ಮಾಯಿ ಸರ್ಕಾರದ್ದಾಗಿದೆ. ಮೀಸಲಾತಿ ಹೋರಾಟ ಕೈ ಮೀರದಂತೆ ನಿಭಾಯಿಸುವ ಸವಾಲು ಸರ್ಕಾರದ್ದಾಗಿದೆ. ಅದರಲ್ಲೂ ಪಂಚಮಸಾಲಿ ಸಮುದಾಯದವರ ಮೀಸಲಾತಿ ಹೋರಾಟ ಉಲ್ಬಣಿಸದಂತೆ ನೋಡಿಕೊಳ್ಳುವ ಪರೀಕ್ಷೆ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿತ್ತು. ಸದ್ಯಕ್ಕೆ ಮೀಸಲಾತಿ ಹೋರಾಟಗಾರರ ಮನವೊಲಿಸುವಲ್ಲಿ ಬೊಮ್ಮಾಯಿ ಯಶಸ್ಸು ಕಂಡಿದ್ದಾರೆ.

ಮೈಸೂರು ಅತ್ಯಾಚಾರ ಪ್ರಕರಣದ ವಿವಾದ:

ಇತ್ತ ಮೈಸೂರು ಅತ್ಯಾಚಾರ ಪ್ರಕರಣ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಮುಜುಗರವನ್ನು ತಂದಿತು.‌ ಒಂದೆಡೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದರೆ, ಇನ್ನೊಂದೆಡೆ ಗೃಹ ಸಚಿವರ ವಿವಾದಾತ್ಮಕ ಹೇಳಿಕೆ ಸರ್ಕಾರವನ್ನು ಪೇಚಿಗೆ ಸಿಲುಕಿಸಿತು‌.

ಆರೋಪಿಗಳ ಬಂಧನ ವಿಳಂಬವಾಗುತ್ತಿದ್ದಂತೆ ಬೊಮ್ಮಾಯಿ ಸರ್ಕಾರದ ಮೇಲಿನ ಜನಾಕ್ರೋಶವೂ ಹೆಚ್ಚಾಗತೊಡಗಿತು. ಬಳಿಕ ಸ್ವತಃ ಸಿಎಂ ಬೊಮ್ಮಾಯಿ ಪ್ರಕರಣ ಸಂಬಂಧ ಮಧ್ಯ ಪ್ರವೇಶ ಮಾಡಿದರು. ಆರೋಪಿಗಳ ಬಂಧನವಾಗುತ್ತಿದ್ದಂತೆ ಪ್ರಕರಣ ಎಬ್ಬಿಸಿದ್ದ ಬಿಸಿ ತಣ್ಣಗಾಯಿತು.

ಮೈ ಶುಗರ್ ಗಲಾಟೆ, ರಸ್ತೆ ಗುಂಡಿ, ಕಲ್ಲಿದ್ದಲು ಕೊರತೆ ಗದ್ದಲ:

ಬೊಮ್ಮಾಯಿ ಸರ್ಕಾರದ ಶತದಿನದ ಆಡಳಿತಾವಧಿಯಲ್ಲಿ ಗಂಭೀರವಾಗಿ ಕಾಡಿದ್ದು ಮಂಡ್ಯ ಮೈ ಶುಗರ್ ವಿವಾದ, ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಹಾಗೂ ಕಲ್ಲಿದ್ದಲು ಕೊರತೆಯ ಸಂಕಷ್ಟ.

ಮಂಡ್ಯ ಮೈ ಶುಗರ್ ಖಾಸಗೀಕರಣದ ವಿರುದ್ಧ ಆ ಭಾಗದ ರೈತರು ಬೀದಿಗಿಳಿದು ಪ್ರತಿಭಟನೆಯ ಹಾದಿ ಹಿಡಿದಿದ್ದರು. ಇತ್ತ ಜೆಡಿಎಸ್ ನಾಯಕರೂ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು. ಬಳಿಕ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಸದ್ಯಕ್ಕೆ ಖಾಸಗೀಕರಣ ನಿರ್ಧಾರ ಕೈಬಿಟ್ಟು, ಬಿಕ್ಕಟ್ಟಿಗೆ ಅಂತ್ಯ ಹಾಡುವಲ್ಲಿ ಸರ್ಕಾರ ಸಫಲವಾಯಿತು.

ಬೆಂಗಳೂರು ರಸ್ತೆ ಗುಂಡಿ ಸಹ ಸರ್ಕಾರವನ್ನು ಅತಿಯಾಗಿ ಕಾಡಿದ ಸವಾಲು. ಹೈಕೋರ್ಟ್ ಛಾಟಿ ಏಟಿನ ಮಧ್ಯೆ ರಸ್ತೆ ಗುಂಡಿಗಳನ್ನು ಮುಚ್ಚುವ ಅನಿವಾರ್ಯತೆ ಸರ್ಕಾರಕ್ಕೆ ತಲೆದೋರಿತ್ತು. ಇತ್ತ ಬಿಟ್ಟು ಬಿಡದೆ ಕಾಡಿದ ಮಳೆಯ ಆರ್ಭಟದಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ದೊಡ್ಡ ಸವಾಲಾಗಿಯೇ ಕಾಡುತ್ತಿದೆ.

ಕಲ್ಲಿದ್ದಲು ಕೊರತೆ ರಾಜ್ಯ ಸರ್ಕಾರವನ್ನು ಬಹುವಾಗಿ ಕಾಡಿದ ಸಂಕಷ್ಟ. ಕಲ್ಲಿದ್ದಲು ಕೊರತೆಯಿಂದ ರಾಜ್ಯ ಕತ್ತಲ ಕೂಪದ ಅಂಚಿಗೆ ಹೋಗುವ ಭೀತಿ ಎದುರಾಯಿತು. ಕಲ್ಲಿದ್ದಲು ಕೊರತೆ ನೀಗಿಸುವ ದೊಡ್ಡ ಸವಾಲು ಸರ್ಕಾರದ ಮುಂದೆ ಎದುರಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಸಿಎಂ, ಕೇಂದ್ರ ಸಚಿವರ ಬಳಿ ಮಾತುಕತೆ ನಡೆಸಿ, ಕಲ್ಲಿದ್ದಲು ಪೂರೈಕೆ ಸಹಜ ಸ್ಥಿತಿಗೆ ಬರುವಂತೆ ಮಾಡಿದರು.

ಪುನೀತ್ ರಾಜ್‍ಕುಮಾರ್ ನಿಧನದ ಬರಸಿಡಿಲು:

ರಾಜ್ಯ ಸರ್ಕಾರಕ್ಕೆ ಎದುರಾದ ಅತಿದೊಡ್ಡ ಸವಾಲು ನಟ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ. ಅಪ್ಪು ಹೃದಯಾಘಾತದಿಂದ ನಿಧನರಾದ ಸುದ್ದಿ ಕುಟುಂಬ, ಅಭಿಮಾನಿಗಳಿಗೆ ಮಾತ್ರವಲ್ಲದೇ ಸರ್ಕಾರಕ್ಕೂ ಬರಸಿಡಿಲು ಬಡಿದಂತಾಯಿತು.

ಡಾ.ರಾಜಕುಮಾರ್ ನಿಧನದ ವೇಳೆ ಸಂಭವಿಸಿದ ಹಿಂಸಾಚಾರ ಸರ್ಕಾರದ ಕಣ್ಣ ಮುಂದೆ ಬಂದಿತ್ತು. ಪುನೀತ್ ರಾಜ್‍ಕುಮಾರ್ ನಿಧನದಿಂದಲೂ ಅದೇ ಹಿಂಸಾಚಾರ ಮರುಕಳಿಸುವ ಆತಂಕ ಎದುರಾಗಿತ್ತು. ಆದರೆ ಬೊಮ್ಮಾಯಿ ಸರ್ಕಾರ ಅಪ್ಪು ನಿಧನ, ಅಂತಿಮ ದರ್ಶನ, ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಜಾಗರೂಕತೆಯಿಂದ, ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಸಫಲವಾಯಿತು.

ಸ್ವಲ್ಪ ಎಡವಟ್ಟಾಗಿದ್ದರೂ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿತ್ತು. ಆದರೆ ಎಲ್ಲಾ ಆಯಾಮದಲ್ಲೂ ಎಚ್ಚರಿಕೆಯ ಹೆಜ್ಜೆ ಇಟ್ಟ ಸರ್ಕಾರ, ಎದುರಾಗಿದ್ದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿತು. ಯಾವುದೇ ಹಿಂಸಾಚಾರಕ್ಕೆ ಆಸ್ಪದ ನೀಡದೆ ಸುಸೂತ್ರವಾಗಿ ಅಪ್ಪು ಅಂತಿಮಯಾತ್ರೆಯನ್ನು ನೆರವೇರಿಸಿತು.

ಪೂರ್ವ ಪ್ರಾಥಮಿಕ ಶಾಲೆ ಆರಂಭದ ಸವಾಲು:

ಕೋವಿಡ್ ಮೂರನೇ ಅಲೆಯ ಆತಂಕದ ಮಧ್ಯೆ 1-5 ತರಗತಿ ವರೆಗಿನ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ದೊಡ್ಡ ಸವಾಲು ಸರ್ಕಾರದ ಮುಂದೆ ಇತ್ತು.

ಪೋಷಕರ ಆತಂಕ, ಸಂಘ ಸಂಸ್ಥೆಗಳ ವಿರೋಧದ‌ ಮಧ್ಯೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ, ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸುವ ನಿರ್ಧಾರ ಕೈಗೊಂಡಿತು. ಮಕ್ಕಳ ಆರೋಗ್ಯದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸವಾಲಿನಿಂದಲೇ ಶಾಲೆ ಆರಂಭದ ತೀರ್ಮಾನ ಕೈಗೊಂಡಿತು.

ಗ್ರಾ.ಪಂ, ಉಪಸಮರದ ಅಗ್ನಿಪರೀಕ್ಷೆ:

ಬೊಮ್ಮಾಯಿ ಸರ್ಕಾರದ ಶತಕದ ಆಡಳಿತದಲ್ಲಿ ಮತ್ತೊಂದು ಅಗ್ನಿ ಪರೀಕ್ಷೆಯಾಗಿದ್ದು ಗ್ರಾಮ ಪಂಚಾಯತ್​ ಚುನಾವಣೆ ಹಾಗೂ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ.

ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಅಗ್ನಿ ಪರೀಕ್ಷೆ ಒಡ್ಡಿತ್ತು. ಇತ್ತ ಜೆಡಿಎಸ್ ಕೂಡ ತೀವ್ರ ಪೈಪೋಟಿ ನೀಡಿತ್ತು.‌ ಗ್ರಾ.ಪಂ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೆ ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಮುಖಂಭಂಗವಾಗುತ್ತಿತ್ತು. ಹೀಗಾಗಿ ಗ್ರಾಮ ಪಂಚಾಯತ್​ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ನಿರೀಕ್ಷಿತ ಅಲ್ಲವಾದ್ರು ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲವಾಯಿತು.

ಶತದಿನದ ಆಡಳಿತದ ಕೊನೆ ದಿನಗಳಲ್ಲಿ ಎದುರಾದ ಸಿಂದಗಿ ಹಾಗೂ ಹಾನಗಲ್ ಉಪಸಮರ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಅಗ್ನಿಪರೀಕ್ಷೆಯಾಗಿತ್ತು. ಉಪಸಮರದ ಫಲಿತಾಂಶ ಮುಂದಿನ ಚುನಾವಣೆ, ಸರ್ಕಾರದ ಕಾರ್ಯವೈಖರಿಯ ದಿಕ್ಸೂಚಿಯಂತಲೇ ಬಿಂಬಿತವಾಗುವ ಚರ್ಚೆ. ಹೀಗಾಗಿ ಉಪಸಮರವನ್ನು ಸವಾಲಾಗಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ, ಸಂಪುಟ ಸಚಿವರೆಲ್ಲರನ್ನೂ ಕಣಕ್ಕಿಳಿಸಿ ಬಿರುಸಿನ ಪ್ರಚಾರ ನಡೆಸಿದರು. ಸುಮಾರು ಒಂದು ವಾರಗಳ ಕಾಲ ಉಪಸಮರದ ಅಖಾಡದಲ್ಲೇ ಇದ್ದು ಸಿಎಂ ಬಳಗ ಹಗಲಿರುಳು ಚುನಾವಣಾ ಕಾರ್ಯದಲ್ಲಿ ತೊಡಗಿದರು.

ಉಪಸಮರದ ಫಲಿತಾಂಶ ಸರ್ಕಾರಕ್ಕೆ ಸೋಲು ಗೆಲುವಿನ ಸಿಹಿ, ಕಹಿಯ ಅನುಭವ ನೀಡಿತು. ಸಿಎಂ ತವರು ಜಿಲ್ಲೆಯ ಕ್ಷೇತ್ರವಾದ ಹಾನಗಲ್ ಕೈ ತಪ್ಪಿದರೆ, ಸಿಂದಗಿ ಬಿಜೆಪಿ ತೆಕ್ಕೆಗೆ ಬರುವಂತೆ ಮಾಡುವಲ್ಲಿ ಸಫಲವಾಯಿತು.

ABOUT THE AUTHOR

...view details