ಬೆಂಗಳೂರು: ಕೊರೊನಾ ಕಾಲಘಟ್ಟದಲ್ಲೂ ಯಶಸ್ವಿಯಾಗಿ ಹಲವು ಮುಖ್ಯ ಪರೀಕ್ಷೆಯನ್ನು ನಡೆಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಟಿಇಟಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಆಗಸ್ಟ್ 22ರಂದು 34 ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟಸ್ನಲ್ಲಿ ಪರೀಕ್ಷೆ ನಡೆಯಲಿದೆ.
ಒಂದೂವರೆ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ನೋಂದಣಿ :1-8ನೇ ತರಗತಿ ಶಿಕ್ಷಕರ ನೇಮಕಾತಿ ಅರ್ಹತೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಪತ್ರಿಕೆಗೆ 1,03,267 ಮತ್ತು ಎರಡನೇ ಪತ್ರಿಕೆ 1,51,095 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮೊದಲ ಪತ್ರಿಕೆಗೆ 432 ಹಾಗೂ ಎರಡನೇ ಪತ್ರಿಕೆಗೆ 634 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯ ದಿನಾಂಕ-ಸಮಯ :ಮೊದಲ ಪತ್ರಿಕೆಯ ಪರೀಕ್ಷೆಯು 9:30ರಿಂದ 12ರ ತನಕ ಹಾಗೂ ಎರಡನೇ ಪರೀಕ್ಷೆಯು ಮಧ್ಯಾಹ್ನ 2:30ರಿಂದ 4ರ ತನಕ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕಿಂತ ಒಂದು ಗಂಟೆಯ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಸಂಬಂಧ ಯಾವುದೇ ವಿನಾಯಿತಿಯೂ ಇರುವುದಿಲ್ಲ. ಕೊರೊನಾ ಹಿನ್ನೆಲೆ ಎಸ್ಒಪಿ ಜಾರಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತೆಗಳು :ಒಂದರಿಂದ ಐದನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿ.ಇಡಿ ಉತ್ತೀರ್ಣರಾಗಿರಬೇಕು. ಹಾಗೂ 6-8ನೇ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಡಿ.ಇಡಿ ಅಥವಾ ಪದವಿಯೊಂದಿಗೆ ಬಿಇಡಿ ಅಥವಾ ಬಿಎಇಡಿ ಅಥವಾ ಬಿಎಸ್‌ಸಿ ಇಡಿಯಲ್ಲಿ ಉತ್ತೀರ್ಣರಾಗಿರಬೇಕು. ಕೊನೆಯ ವರ್ಷಗಳ ಡಿಇಡಿ, ಬಿಇಡಿ, ಬಿಎಇಡಿ ಅಥವಾ ಬಿಎಸ್ಸಿಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಲು ಇಲಾಖೆ ಅವಕಾಶ ನೀಡಿತ್ತು.
ಕರ್ಫ್ಯೂದಿಂದ ವಿನಾಯಿತಿ :ಪರೀಕ್ಷೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ವೀಕೆಂಡ್ ಮತ್ತು ನೈಟ್ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ ಅಂತಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಸೋಂಕು ಹೆಚ್ಚಾಗಿರುವ ಕೆಲವು ಜಿಲ್ಲೆಗಳಲ್ಲಿ ವೀಕೆಂಡ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಟಿಇಟಿ ಪರೀಕ್ಷೆ ಬರೆಯುತ್ತಿರುವ ಕುರಿತು ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಬಹುದು. ಅಭ್ಯರ್ಥಿಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲು ಈಗಾಗಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆಯೆಂದು ಮಾಹಿತಿ ನೀಡಿದ್ದಾರೆ.