ಕರ್ನಾಟಕ

karnataka

ETV Bharat / city

ಬಹುಮಹಡಿ ವಸತಿ ಯೋಜನೆಯಡಿ ಪಟ್ಟಿ ಸಲ್ಲಿಸಲು ಶಾಸಕರಿಗೆ ವಾರದ ಗಡುವು: ಸಚಿವ ಸೋಮಣ್ಣ - ಜಿ ಕೆಟಗರಿ

ಜಿ ಕೆಟಗರಿಯಡಿ ಶೇ.5ರಷ್ಟು ನಿವೇಶನಗಳನ್ನು ಪ್ರಶಸ್ತಿ ಪುರಸ್ಕೃತರು, ಮಾಜಿ ಸೈನಿಕರು, ಪತ್ರಕರ್ತರು, ಕ್ರೀಡಾಪಟುಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಂಚಲಿದ್ದು, ಶೀಘ್ರವೇ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

week-deadline-for-mlas-to-submit-list-under-housing-scheme-says-minister-somanna
ಬಹುಮಹಡಿ ವಸತಿ ಯೋಜನೆಯಡಿ ಪಟ್ಟಿ ಸಲ್ಲಿಸಲು ಶಾಸಕರಿಗೆ ವಾರದ ಗಡುವು: ಸಚಿವ ಸೋಮಣ್ಣ

By

Published : Aug 19, 2022, 10:37 PM IST

ಬೆಂಗಳೂರು: ರಾಜಧಾನಿಯ ವಿವಿಧೆಡೆ ನಿರ್ಮಾಣ ಹಂತದ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಶಾಸಕರಿಗೆ ಪಟ್ಟಿ ಸಲ್ಲಿಸಲು ಒಂದು ವಾರದ ಗಡುವು ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ 1,553 ಎಕರೆ ಸ್ವಾಧೀನಪಡಿಸಿಕೊಂಡು 48,498 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರಗತಿ ಹಂತದ ಮನೆಗಳ ಪೈಕಿ ಅಗ್ರಹಾರಪಾಳ್ಯ, ಬೆಳ್ಳಳ್ಳಿ ಮತ್ತಿತರೆಡೆ 2,000 ಮನೆಗಳು ಪೂರ್ಣಗೊಂಡಿದ್ದು, ಅರ್ಜಿದಾರರಿಗೆ ಶೀಘ್ರದಲ್ಲಿ ಹಸ್ತಾಂತರಿಸಲಾಗುತ್ತದೆ ಎಂದರು.

ಈ ವಸತಿ ಯೋಜನೆಯಡಿ ಶೇ.50ರಷ್ಟು ಮನೆಗಳನ್ನು ಆಯಾ ಕ್ಷೇತ್ರದ ಶಾಸಕರಿಗೆ ಮೀಸಲಿಟ್ಟಿದ್ದೇವೆ. ಫಲಾನುಭವಿಗಳ ಪಟ್ಟಿ ನೀಡುವಂತೆ ಪತ್ರ ಬರೆದಿದ್ದು, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೊರತುಪಡಿಸಿ ಯಾರೊಬ್ಬರೂ ಸ್ಪಂದಿಸಿಲ್ಲ. ಮತ್ತೊಮ್ಮೆ ಮನವಿ ಮಾಡಿಕೊಂಡ ಬಳಿಕ ಅರವಿಂದ ಲಿಂಬಾವಳಿ, ಬೈರತಿ ಬಸವರಾಜ, ಕೃಷ್ಣಬೈರೇಗೌಡ, ದಾಸನಹಳ್ಳಿ ಮಂಜುನಾಥ್ ಇನ್ನೂ ಕೆಲವರು ಪಟ್ಟಿ ಸಲ್ಲಿಸುವ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಬಹುಮಹಡಿ ವಸತಿ ಯೋಜನೆಯಡಿ ಪಟ್ಟಿ ಸಲ್ಲಿಸಲು ಶಾಸಕರಿಗೆ ವಾರದ ಗಡುವು: ಸಚಿವ ಸೋಮಣ್ಣ

ಈಗ ಎಲ್ಲ ಶಾಸಕರಿಗೆ ಒಂದು ವಾರದ ಗಡುವು ನೀಡಿದ್ದು, ಪಟ್ಟಿ ನೀಡದಿದ್ದರೆ ಸ್ಥಳೀಯ ಅಧಿಕಾರಿಗಳ ಜೊತೆ ಸೇರಿಕೊಂಡು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ 42,000 ಅರ್ಜಿಗಳು ಸಲ್ಲಿಕೆಯಾಗಿದ್ದು, 8,000 ಜನರು ಪ್ರಾರಂಭಿಕ ಮೊತ್ತವನ್ನು ಭರಿಸಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಜೊತೆ ಚರ್ಚೆಗೆ ಸಿದ್ಧ:ಸಿದ್ದರಾಮಯ್ಯ ಅಧಿಕಾರಾವಧಿ ಕೊನೆ ಅವಧಿಯಲ್ಲಿ ತರಾತುರಿಯಿಂದ ರಾಜ್ಯದಲ್ಲಿ ಮಂಜೂರು ಮಾಡಿದ್ದ 14 ಲಕ್ಷ ಮನೆಗಳು, ಸಿಎಂ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಪ್ರಗತಿಯನ್ನು ಖುದ್ದು ತೋರಿಸಲು ತಯಾರಿರುವೆ ಎಂದು ಸಚಿವ ಸೋಮಣ್ಣ ಇದೇ ವೇಳೆ ತಿಳಿಸಿದರು. ಸಿದ್ದರಾಮಯ್ಯ ಹುರುಳಿಲ್ಲದ ಟೀಕೆ ಬಿಟ್ಟು, ಭೌತಿಕ-ಆರ್ಥಿಕ ಪ್ರಗತಿ ಕಣ್ಣಾರೆ ನೋಡಲು ಸಿದ್ಧರಾಗಲಿ. ನಾನು ಹೇಳಿರುವುದು ಸುಳ್ಳು ಎಂದಾದರೆ, ತಪ್ಪು ಒಪ್ಪಿಕೊಳ್ಳಲು ಸಿದ್ಧವೆಂದೂ ಸವಾಲೆಸೆದರು.

18 ಯೋಜನೆಗಳಿಗೆ ವ್ಯಾಜ್ಯದಿಂದ ಮುಕ್ತಿ:ಸುಪ್ರೀಂಕೋರ್ಟ್‌ನಲ್ಲಿ ಸಮರ್ಥ ವಾದ ಮಂಡನೆ ಹಾಗೂ ರೈತರ ಮನವೊಲಿಕೆಯಿಂದಾಗ ಕರ್ನಾಟಕ ಗೃಹ ಮಂಡಳಿ 18 ಯೋಜನೆಗಳು ದೀರ್ಘಾವಧಿ ವ್ಯಾಜ್ಯದಿಂದ ಮುಕ್ತವಾಗಿವೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಮಗಳೂರು, ಉಡುಪಿ ಸೇರಿ ಏಳೆಂಟು ಜಿಲ್ಲೆಗಳಿಗೆ ಸೇರಿದ 18 ಯೋಜನೆಗಳ 103 ಪ್ರಕರಣಗಳು ಇತ್ಯರ್ಥವಾಗಿದ್ದು, 600 ಎಕರೆ ಜಮೀನು ವಸತಿ ಬಡಾವಣೆ ಅಭಿವೃದ್ಧಿಗೆ ಲಭ್ಯವಾಗಿದೆ. ಒಟ್ಟಾರೆ 7,000 ನಿವೇಶನಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ವಿವರಿಸಿದರು.

ಈ ಪೈಕಿ 3,500 ನಿವೇಶನಗಳನ್ನು ಭೂಮಿ ನೀಡಿದ ರೈತರಿಗೆ ಕಾಯ್ದೆ ರೀತ್ಯ ಮೀಸಲಿಡಲಾಗುತ್ತದೆ. ಅಭಿವೃದ್ಧಿಪಡಿಸಿದ ನಿವೇಶನಕ್ಕೆ ಮಂಡಳಿಯೇ ದರ ನಿಗದಿಪಡಿಸಿದರೂ ರೈತರು ತಮ್ಮ ವಿವೇಚನೆಯಂತೆ ಮಾರಾಟ ಮಾಡಲು ಅವಕಾಶವಿದೆ. ಮಂಡಳಿಯಿಂದ 600 ಎಕರೆಗೆ ನಿವೇಶನಗಳ ಅಭಿವೃದ್ಧಿಗೆ ವಿಸ್ತೃತ ಯೋಜನೆ ಸೆಪ್ಟೆಂಬರ್ ಅಂತ್ಯದೊಳಗೆ ಸಿದ್ಧವಾಗಲಿದ್ದು, ನಂತರ ಟೆಂಡರ್ ಕರೆದು ನವೆಂಬರ್ ಒಳಗೆ ಕಾರ್ಯಾದೇಶ ನೀಡಲಾಗುವುದು ಎಂದು ಹೇಳಿದರು.

50 ಸಾವಿರ ನಿವೇಶನ:ವಿವಿಧ ಯೋಜನೆಗಳಡಿ ಬೆಂಗಳೂರು ಸೇರಿ ರಾಜ್ಯದಲ್ಲಿ 50 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿ ವರ್ಷಾಂತ್ಯದೊಳಗೆ ಹಂಚುವುದು ಮಂಡಳಿ ಗುರಿಯಾಗಿದೆ. ಸದ್ಯಕ್ಕೆ ನೆಲಮಂಗಲ, ಇಲ್ವಾಲ, ಮುಂಡರಗಿ, ಕೊಡಗಲ್, ಹರಿಹರ, ಗದಗ, ಚನ್ನಗಿರಿ ಮತ್ತಿತರ ನಗರ-ಪಟ್ಟಣಗಳಲ್ಲಿ ಅಭಿವೃದ್ಧಿಪಡಿಸಿದ ಒಟ್ಟು 6,015 ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿ ಕೆಟಗರಿಯಡಿ ನಿವೇಶನ ಮೀಸಲು: 'ಜಿ' ಕೆಟಗರಿಯಡಿ ಶೇ.5ರಷ್ಟು ನಿವೇಶನಗಳನ್ನು ಕಾಯ್ದಿರಿಸಲು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಒಪ್ಪಿಗೆ ನೀಡಿದ್ದು, ನೆಲಮಂಗಲ, ಸೂರ್ಯನಗರ, ದೊಡ್ಡ ಆಲದಮರ ಇನ್ನಿತರೆಡೆ ಅಭಿವೃದ್ಧಿಪಡಿಸುವ ನಿವೇಶನಗಳಲ್ಲಿ ಇದನ್ನು ಕಾಯ್ದಿರಿಸಲಾಗುತ್ತದೆ‌. ಈ ನಿವೇಶನಗಳನ್ನು ಪ್ರಶಸ್ತಿ ಪುರಸ್ಕೃತರು, ಮಾಜಿ ಸೈನಿಕರು, ಪತ್ರಕರ್ತರು, ಕ್ರೀಡಾಪಟುಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಂಚಲಿದ್ದು, ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದೂ ಸಚಿವ ಸೋಮಣ್ಣ ತಿಳಿಸಿದರು.

ಇದನ್ನೂ ಓದಿ:ಕಾರವಾರದಲ್ಲಿ ಪಾಳು ಬಿದ್ದ ಕೈಗಾರಿಕಾ ವಲಯ: ಜಾಗ ವಾಪಸ್​ ಪಡೆಯಲು ಮುಂದಾದ ಇಲಾಖೆ

ABOUT THE AUTHOR

...view details