ಬೆಂಗಳೂರು: ಇಂದು ರಾಜ್ಯಾದ್ಯಂತ ಮಾನ್ಸೂನ್ ಚುರುಕಾಗಿದ್ದು, ರಾಜ್ಯದ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ 22 ಸೆಂ.ಮೀ ಮಳೆಯಾಗಿದೆ. ನಿಪ್ಪಾಣಿ 14 ಸೆಂ.ಮೀ, ಶೃಂಗೇರಿಯಲ್ಲಿ 12 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್ ಪಾಟೀಲ್ ಮಾತನಾಡಿ, ಕಡಿಮೆ ಒತ್ತಡದಿಂದಾಗಿ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಜೂನ್ 17ರಿಂದ 21ರವರೆಗೆ ವ್ಯಾಪಕ ಮಳೆಯಾಗಲಿದೆ. ಉತ್ತರ ಕನ್ನಡ , ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಹಿನ್ನೆಲೆ ಜೂನ್ 17, 18ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 19 ಹಾಗೂ 20 ರವರೆಗೆ ಸಾಧಾರಣ ಮಳೆಯಾಗಲಿರುವುದರಿಂದ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದಿದ್ದಾರೆ.
ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್ ಪಾಟೀಲ್ ಇದನ್ನೂ ಓದಿ:12th ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ CBSE ಮಾನದಂಡ ಪ್ರಕಟ: ಜುಲೈ 31ರೊಳಗೆ ರಿಸಲ್ಟ್
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಇಂದು ಮತ್ತು ನಾಳೆ ವ್ಯಾಪಕ ಮಳೆಯಾಗಲಿದೆ. ಜೂನ್ 19 ರಿಂದ 20ರವರೆಗೆ ಕೆಲವು ಸ್ಥಳಗಳಲ್ಲಿ ಮಾತ್ರ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜೂನ್ 17ರವರೆಗೆ ಭಾರಿ ಮಳೆ ಆಗಲಿರುವುದರಿಂದ ಆರೆಂಜ್ ಅಲರ್ಟ್ ಕೊಡಲಾಗಿದೆ. ಜೂನ್ 18 ರಂದು ಎಲ್ಲೋ ಅಲರ್ಟ್ ಕೊಡಲಾಗಿದೆ.
ಬೆಳಗಾವಿ, ಬೀದರ್, ಕಲಬುರ್ಗಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆಗೆ ಎಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಂಟಿಗ್ರೇಡ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ.