ಕರ್ನಾಟಕ

karnataka

ETV Bharat / city

ರಾಷ್ಟ್ರಕವಿ ಕುವೆಂಪುಗಾದ ಅವಮಾನ ಖಂಡಿಸಿ ನಡೆಸುವ ಪಾದಯಾತ್ರೆ ಕೈಬಿಡಲ್ಲ:  ಕಿಮ್ಮನೆ ರತ್ನಾಕರ್ - ಪುಸ್ತಕ ಪರಿಷ್ಕರಣ ಸಮಿತಿ

ಸಚಿವರು ಮುಖ್ಯಮಂತ್ರಿಗಳಿಗೆ ಕೊಟ್ಟಿರುವ ವರದಿಯನ್ನು ನಾವು ಒಪ್ಪುವುದಿಲ್ಲ. ಹಳೆಯ ಪಠ್ಯ ಮುಂದುವರಿಸಿ, ಹೊಸ ಸಮಿತಿ ರಚಿಸಿ, ಎಲ್ಲರೊಂದಿಗೆ ಚರ್ಚೆ ಮಾಡಿ ಸದನದಲ್ಲಿ ಚರ್ಚೆ ಮಾಡಲಿ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ..

Kimmane Rathnakar Talked in Pressmeet
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್​

By

Published : Jun 4, 2022, 7:07 PM IST

ಬೆಂಗಳೂರು :ರಾಷ್ಟ್ರಕವಿ ಕುವೆಂಪುಗೆ ಆಗಿರುವ ಅನ್ಯಾಯ ಖಂಡಿಸಿ ಕೈಗೊಳ್ಳಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಜಾಗೊಳಿಸಬೇಕು ಹಾಗೂ ಪರಿಷ್ಕೃತ ಪಠ್ಯವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಕುವೆಂಪು ಜನ್ಮಸ್ಥಳ ಕುಪ್ಪಳ್ಳಿಯಿಂದ ಪಾದಯಾತ್ರೆ ಮಾಡುವುದಾಗಿ ನಾನು ಆಗ್ರಹಿಸಿದ್ದೆ ಎಂದು ಹೇಳಿದರು.

ವಿವಿಧ ಭಾಗಗಳಿಂದ ಸಾಹಿತಿಗಳು, ಸಾಹಿತ್ಯಾಸಕ್ತರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ರಮೇಶ್ ಕುಮಾರ್, ಸಾಹಿತಿ ಪ್ರೊ.ಸಿದ್ದರಾಮಯ್ಯ ಅವರು ನಾವು ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ನಿನ್ನೆ ಸರ್ಕಾರಕ್ಕೆ ನೀಡಿರುವ ವರದಿ ಮೂಲಕ ಈ ವಿಚಾರ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಸರ್ಕಾರದ ಈಗಿನ ಕ್ರಮ ನಮಗೆ ಪೂರ್ಣಪ್ರಮಾಣದಲ್ಲಿ ಸ್ವೀಕಾರಾರ್ಹವಲ್ಲ. ಹೀಗಾಗಿ, ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಎಲ್ಲರ ಜತೆ ಚರ್ಚೆ ಮಾಡಿ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು.

ರಾಷ್ಟ್ರಕವಿ ಕುವೆಂಪುಗಾದ ಅವಮಾನ ಖಂಡಿಸಿ ನಡೆಸುವ ಪಾದಯಾತ್ರೆ ಕುರಿತಂತೆಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರುಮಾತನಾಡಿರುವುದು..​

ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು, ಹೋಟೆಲ್​ನಲ್ಲಿ ಹೋಗಿ ಬೇಕಾದ ತಿನಿಸು ಖರೀದಿಸಿದಂತಲ್ಲ. ಇಲ್ಲಿ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಪಠ್ಯ ಪುಸ್ತಕದಲ್ಲಿ ಆಟವಾಡಲು ಮುಂದಾಗುವುದಾದರೆ ಅವರಿಗೆ ಸರ್ಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ. ಕೇವಲ 2 ತಿಂಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿ ಮಕ್ಕಳ ಅಂದರೆ ಸುಮಾರು 1 ಕೋಟಿ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಸಾಧ್ಯವೇ? ಇವರಿಗೆ ಬೇಕಾದವರನ್ನು ನೇಮಿಸಿ, ಇವರಿಗೆ ಪೂರಕವಾಗಿರುವ ಸಾಹಿತಿಗಳ ಬರಹ ಸೇರಿಸಿಕೊಂಡು, ಪ್ರಮುಖರ ಲೇಖನಗಳು, ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಕೈಬಿಡುವುದಾದರೆ ಇದು ಸಮಂಜಸವೇ? ಎಂದು ಪ್ರಶ್ನಿಸಿದರು.

ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಪಠ್ಯ ಪರಿಷ್ಕರಣಾ ಸಮಿತಿಯನ್ನು ಪ್ರಕಟಿಸಿದ್ದೆ. ಅದಕ್ಕೂ ಮುನ್ನ ಸಾಕಷ್ಟು ಚರ್ಚೆ ಮಾಡಿದ್ದೆ. ಕಾರಣ, ನಾನು ಶಿಕ್ಷಣ ಸಚಿವಾಲಯದಿಂದ ಮಾಹಿತಿ ಪಡೆದಾಗ, 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಿದ್ದರು. ದೇಶದ ಶಿಕ್ಷಣ ವ್ಯವಸ್ಥೆ ಮೂರು ವಿಧವಾದ, ರಾಜ್ಯಮಟ್ಟ, ಸಿಬಿಎಸ್​ಸಿ ಹಾಗೂ ಐಸಿಎಸ್​ಸಿ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುತ್ತಿದೆ.

ಬರಗೂರು ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ : ಐಸಿಎಸ್​ಸಿಯಲ್ಲಿರುವ ವಿಷಯಗಳು ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಬರುತ್ತಿದ್ದವು. ಆಗ ರಾಜ್ಯಮಟ್ಟದ ಶಿಕ್ಷಣದಲ್ಲಿ ಓದಿದ, ಬಡವರು, ಆರ್ಥಿಕವಾಗಿ ಹಿಂದುಳಿದ ವರ್ಗದ ದಲಿತ ಮಕ್ಕಳಿಗೆ ಇದು ಕಷ್ಟವಾಗುತ್ತಿತ್ತು. ಇದನ್ನು ಬದಲಿಸಲು ರಾಜ್ಯ ಪಠ್ಯಕ್ರಮದಲ್ಲಿ ಐಸಿಎಸ್​ಸಿ ಹಾಗೂ ಸಿಬಿಎಸ್​ಸಿಯಲ್ಲಿನ ವಿಚಾರಗಳನ್ನು ಸೇರಿಸಲು ಪರಿಷ್ಕರಣಾ ಸಮಿತಿ ನೇಮಿಸಿದೆ.

ಈ ಸಮಿತಿ ರಚಿಸುವಾಗ ಯಾವುದೇ ಸಿದ್ಧಾಂತದ ಪರವಾಗಿ, ಪಕ್ಷದ ಜತೆ ಗುರುತಿಸಿಕೊಳ್ಳದ ಹಾಗೂ ಕರ್ನಾಟಕ ಸಾಹಿತ್ಯದ ಬಗ್ಗೆ ತಿಳಿದಿರುವ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಿದೆ. ಪುಸ್ತಕ ಸಮಿತಿ, ಸಾಹಿತಿಗಳು ಹಾಗೂ ಸಾರ್ವಜನಿಕರ ಜತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬಂದಿದ್ದೆ. ಬರಗೂರು ರಾಮಚಂದ್ರಪ್ಪನವರು ಎರಡೂವರೆ ವರ್ಷಗಳ ಕಾಲ ವಿಷಯವಾರು 27 ಸಮಿತಿ ರಚಿಸಿ, ಆಯಾ ವಿಷಯಗಳ ಅತ್ಯುತ್ತಮ ಉಪಾಧ್ಯಾಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದು ಪರಿಷ್ಕರಣೆ ಮಾಡಿದ್ದರು.

ಇನ್ನು ಸಂಘ-ಸಂಸ್ಥೆಗಳು, ಸಾಹಿತಿಗಳ ಸಂಘಟನೆಗಳ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದರು. ನಂತರ ಅದರಲ್ಲಿ ನ್ಯೂನ್ಯತೆ ಇದ್ದರೆ ಅದನ್ನು ಸರಿಪಡಿಸುವುದಾಗಿಯೂ ಹೇಳಿದ್ದರು ಎಂದರು. ಸಚಿವರು ಮುಖ್ಯಮಂತ್ರಿಗಳಿಗೆ ಕೊಟ್ಟಿರುವ ವರದಿಯನ್ನು ನಾವು ಒಪ್ಪುವುದಿಲ್ಲ. ಹಳೆಯ ಪಠ್ಯ ಮುಂದುವರಿಸಿ, ಹೊಸ ಸಮಿತಿ ರಚಿಸಿ, ಎಲ್ಲರೊಂದಿಗೆ ಚರ್ಚೆ ಮಾಡಿ ಸದನದಲ್ಲಿ ಚರ್ಚೆ ಮಾಡಲಿ ಎಂದರು.

ಬರಗೂರು ಸಮಿತಿ ಒಂದು ಪಕ್ಷದ ಸಮಿತಿ ಆಗಿರಲಿಲ್ಲ: ನಾವು ವಿರೋಧ ಪಕ್ಷದಲ್ಲಿದ್ದೇವೆ. ಇಂತಹ ವಿಚಾರಗಳು ಬಂದಾಗ ನಾವು ಪ್ರಶ್ನೆ ಮಾಡಬೇಕು. ನಾವು ಪ್ರಶ್ನೆ ಮಾಡದಿದ್ದರೆ ನೀವು ಏನು ಮಾಡಲೇ ಇಲ್ಲ ಎಂದೂ ಕೇಳುತ್ತಾರೆ. ಇವರು ಬರಹಗಾರರ ಮೇಲೆ ಮಾಡಿರುವ ಹೇಳಿಕೆಗಳು, ನಾವು ಮಾಡಿದ್ದ ಸಮಿತಿ ಸರಿಯಿಲ್ಲ ಎಂಬ ಹೇಳಿಕೆಗಳನ್ನು ಕೊಟ್ಟಿದ್ದು, ಅದರ ವಿರುದ್ಧ ನಾವು ಮಾತನಾಡಲೇಬೇಕು. ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಒಂದು ಪಕ್ಷದ ಸಮಿತಿಯಾಗಿರಲಿಲ್ಲ. ಕಾನೂನು ಬದ್ಧವಾಗಿ ಸದನದಲ್ಲಿ ಚರ್ಚೆ ಮಾಡಿ ಜಾರಿಗೆ ತಂದಿರುವುದನ್ನು ಈಗ ಪ್ರಶ್ನಿಸುತ್ತಿದ್ದಾರೆ. ನಾವು ಅದಕ್ಕೆ ಉತ್ತರ ನೀಡಲೇಬೇಕು. ಇದು ನಮ್ಮ ಜವಾಬ್ದಾರಿ ಎಂದರು.

ಈಗ ಹಳೇ ಪುಸ್ತಕವನ್ನೇ ಮಕ್ಕಳಿಗೆ ನೀಡಿದರೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಇನ್ನು ಜೂನ್ ತಿಂಗಳು, ಒಂದು ವಾರದಲ್ಲಿ ಹಳೇ ಪಠ್ಯವನ್ನೇ ಮುದ್ರಿಸಿ ನೀಡಿದರೆ, ಮಕ್ಕಳಿಗೆ ಓದಲು ಇನ್ನು ಒಂದು ವರ್ಷ ಸಮಯಾವಕಾಶವಿದೆ. ನಾನು ಸಚಿವನಾಗುವ ಮುನ್ನ ಆಗಸ್ಟ್ ತಿಂಗಳಲ್ಲಿ ಪುಸ್ತಕ ವಿತರಣೆ ಆಗಿರುವ ಉದಾಹರಣೆಗಳಿವೆ. ಕಲಿಕೆ ಎಂಬುದು ಗಂಭೀರ ವಿಚಾರ. ಇದರಲ್ಲಿ ಆಟವಾಡುವುದು ಸರಿಯಲ್ಲ ಎಂದರು.

ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಪಠ್ಯದಲ್ಲಿ ಲೋಪವಿದ್ದರೆ ಅದನ್ನು ಶಾಸನ ಸಮಿತಿಯಲ್ಲಿ ಚರ್ಚೆ ಮಾಡಿ, ಪ್ರಶ್ನೆ ಮಾಡಲು ಅವಕಾಶ ಇರಲಿಲ್ಲವೇ? ಚರ್ಚೆ ಆಗಿ, ಜಾರಿಯಾಗಿ ಮೂರು ವರ್ಷ ಕಳೆದ ನಂತರ ಈಗ ಪ್ರಶ್ನೆ ಕೇಳುವುದೇ? ಈ ಸರ್ಕಾರ ಪಠ್ಯ ಕ್ರಮ ಬದಲಾವಣೆ ವಿಚಾರವನ್ನು ಸದನದ ಮುಂದೆ ಪ್ರಸ್ತಾಪವೇ ಮಾಡಿಲ್ಲ. ಇದನ್ನು ಪ್ರಸ್ತಾಪ ಮಾಡದೇ ನಾವು ಹೇಗೆ ಚರ್ಚೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಎನ್ಇಪಿ ಶ್ರೀಮಂತರ ಪರವಾಗಿ ತಂದಿರುವ ನೀತಿ. ಅದರಲ್ಲಿ ಮುಕ್ತ ಅವಕಾಶ ನೀಡಿದ್ದು, ಬಡವರಿಗೆ ಅವಕಾಶವೇ ಇಲ್ಲದಂತಾಗಿದೆ. ನರ್ಸರಿಯಿಂದ ದ್ವಿತೀಯ ಪಿಯುಸಿವರೆಗೆ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಇದನ್ನೂ ಓದಿ:ರೋಹಿತ್​ ಚಕ್ರತೀರ್ಥ ಸಮಿತಿ ವಿಸರ್ಜನೆ, ಪರಿಷ್ಕೃತ ಪಠ್ಯದಲ್ಲಿ ಆಕ್ಷೇಪಾರ್ಹವಿದ್ದಲ್ಲಿ ಪರಿಷ್ಕರಣೆಗೆ ಸಿದ್ಧ: ವಿವಾದಕ್ಕೆ ತೆರೆ ಎಳೆದ ಸಿಎಂ!

ABOUT THE AUTHOR

...view details