ಬೆಂಗಳೂರು:ರಾಜ್ಯ ಸರ್ಕಾರದಗುತ್ತಿಗೆ ಕಾಮಗಾರಿಗಳಲ್ಲಿನ ಶೇ.40ರಷ್ಟು ಕಮಿಷನ್ ಆರೋಪ ಕುರಿತು ನಿಯಮ 60ರಡಿ ಕಾಂಗ್ರೆಸ್ ಸಲ್ಲಿಸಿದ್ದ ನಿಲುವಳಿ ಸೂಚನೆ ತಿರಸ್ಕಾರವಾಗಿದೆ. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇದನ್ನು ತಿರಸ್ಕರಿಸಿದ್ದು, ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ಬಳಿ ಹೋಗಿ ಬಿಜೆಪಿಯವರ ಪರ್ಸೆಂಟೇಜ್ ಬಂಡವಾಳ ಬಯಲು ಮಾಡುವುದಾಗಿ ವಿಪಕ್ಷ ನಾಯಕ ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನ್ ಆರೋಪದ ನಿಯಮ 60ರಡಿ ನಿಲುವಳಿ ಸೂಚನೆ ಕೊಟ್ಟಿದ್ದೆ. ರಾಜ್ಯದ ಕಾಂಟ್ರಾಕ್ಟ್‌ಗಳಲ್ಲಿ ಸುಮಾರು ಶೇ.40 ಕಮೀಷನ್ ಕೇಳುತ್ತಿದ್ದಾರೆ. ಸಚಿವರು ಮತ್ತು ಸಂಸದರು, ಸ್ಥಳೀಯ ಪ್ರತಿನಿಧಿಗಳು ಕೇಳುತ್ತಿದ್ದಾರೆ ಅಂತ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಇದು ಭಾರತ ದೇಶದ ಇತಿಹಾಸದಲ್ಲೇ ನಡೆದಿರಲಿಲ್ಲ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅನ್ನುವವರು ಪ್ರಧಾನಿಗೆ ಪತ್ರ ಬರೆದಿದ್ದರು. ಒಂದು ಲಕ್ಷ ಜನ ಸದಸ್ಯರು ಇದ್ದಾರೆ. ಇದನ್ನು ವಿವಿಧ ಪತ್ರಿಕೆಗಳು ಸುದ್ದಿಪ್ರಸಾರ ಮಾಡಿವೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೇ ಈ ಬಗ್ಗೆ ಚರ್ಚೆಗೆ ನೋಟಿಸ್ ನೀಡಿದ್ದೆ. ರಾಜ್ಯಪಾಲರ ಭಾಷಣದಲ್ಲಿ ಚರ್ಚೆಗೆ ಅವಕಾಶ ಸಿಗಲಿಲ್ಲ. ಈಗ ಮತ್ತೊಮ್ಮೆ ಅವಕಾಶ ಕೋರಿದ್ದೇವೆ. ಆದರೆ, ಇದು ಈಗಿನ ವಿಷಯ ಅಲ್ಲ ಅಂತ ಅವಕಾಶ ನೀಡಿಲ್ಲ ಎಂದು ಅಸಮಧಾನ ಹೊರಹಾಕಿದರು.
ಜನರ ಹಣ ಲೂಟಿ:ಕಮಿಷನ್ ಬಗ್ಗೆಕೆಂಪಣ್ಣ ಪ್ರಧಾನಿಗೆ ಪತ್ರ ಬರೆದು ಸುಮ್ಮನೆ ಕೂರದೆ ಸುದ್ದಿಗೋಷ್ಟಿಯನ್ನೂ ಮಾಡಿದ್ದಾರೆ. ಪ್ರಧಾನಮಂತ್ರಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೋದಿ 'ಚೌಕೀದಾರ್' ಅಂತ ಹೇಳಿಕೊಂಡಿದ್ದರು. 'ನಾ ಖಾವೂಂಗಾ, ನಾ ಖಾನೆದೂಂಗಾ' ಅಂದರು. ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಕರ್ನಾಟಕ ನೋಡಿದರೆ ಅವರಿಗೆ ಗೊತ್ತಾಗಲಿದೆ. ಶೇ.40 ಕಮಿಷನ್ ಕೊಟ್ಟರೆ, ಶೇ.15 ಜಿಎಸ್ಟಿ, ಕಂಟ್ರಾಕ್ಟರ್ ಶೇ.20ರಷ್ಟು ತಗೋತಾನೆ. ಉಳಿದಿದ್ದರಲ್ಲಿ ಕೆಲಸ ಹೇಗೆ ಆಗುತ್ತದೆ. ಜನರ ಹಣ ಲೂಟಿ ಆಗುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಚರ್ಚೆ ಮಾಡಲು ನಾವು ಅವಕಾಶ ಕೇಳಿದ್ದೆವು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹಿಂದೆ ಚರ್ಚೆ ಆಗಿದೆ ಅಂತ ಹೇಳಿದ್ದಾರೆ. ಪಾಸಿಂಗ್ ರೆಫರೆನ್ಸ್ ಮಾಡಿದ್ದು ಮಾತ್ರ ಬಿಟ್ಟರೆ, ಚರ್ಚೆಗೆ ಬಂದಿಲ್ಲ. ನೂರಾರು ಕೋಟಿ ಲೂಟಿ ಆಗುತ್ತಿದೆ. ಅವರ ಪಕ್ಷದವರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಯಡಿಯೂರಪ್ಪ ಅವರ ಮನೆಯಲ್ಲಿ ಡೀಲಿಂಗ್ ಆಗುತ್ತಿದೆ ಅಂತ ಹೇಳಲಿಲ್ವಾ?. ಈ ಲೂಟಿ ತಪ್ಪಬೇಕೋ?, ಬೇಡವೋ? ಇದನ್ನು ವಿಪಕ್ಷವಾಗಿ ನಾವು ಚರ್ಚೆ ಮಾಡಬೇಕೋ?, ಬೇಡವೋ?. ಬಿಜೆಪಿಯವರು ಬಂಡರು, ಭ್ರಷ್ಟರು. ಅವರ ಉಳುಕು ಹೊರ ಬರುತ್ತದೆ ಅಂತ ಹೆದರಿದ್ದಾರೆ ಎಂದರು.
ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ, ಆಗಲೂ ಉತ್ತರ ಕೊಡಲಿಲ್ಲ. ಇಂದೂ ಕೂಡ ಅನೇಕ ಭ್ರಷ್ಟಾಚಾರ ಹೊರಗೆ ಬರುತ್ತಿದೆ. ನಾಲ್ಕು ವರ್ಷ ಅಧಿಕಾರ ಮಾಡಿದ್ದೀರಾ ಚರ್ಚೆ ಮಾಡಿ. ಆದರೆ, ಚರ್ಚೆ ಮಾಡದೇ ಸ್ಪೀಕರ್ ಮೂಲಕ ತಿರಸ್ಕಾರ ಮಾಡಿಸಿದ್ದಾರೆ. ಉತ್ತರ ನೀಡುವುದರಿಂದ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ ಟೀಕಿಸಿದರು.
ಇದನ್ನೂ ಓದಿ:ಶೇ.40 ಕಮಿಷನ್ ಆರೋಪ ಮೇಲೆ ಚರ್ಚೆಗೆ ಅವಕಾಶ ನಿರಾಕರಣೆ : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ